ADVERTISEMENT

ಮೈಸೂರು ಮೆಡಿಕಲ್ ಕಾಲೇಜಿಗೆ ದೇಹದಾನ: ಅಂತಿಮ ದರ್ಶನ ಪಡೆದ ಗೌಡರು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 14:35 IST
Last Updated 4 ಮಾರ್ಚ್ 2019, 14:35 IST
ವೈದ್ಯ ಮುನಿವೆಂಕಟೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದ ಎಚ್‌.ಡಿ.ದೇವೇಗೌಡ ಮತ್ತು ಸಚಿವ ಎಚ್.ಡಿ.ರೇವಣ್ಣ
ವೈದ್ಯ ಮುನಿವೆಂಕಟೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದ ಎಚ್‌.ಡಿ.ದೇವೇಗೌಡ ಮತ್ತು ಸಚಿವ ಎಚ್.ಡಿ.ರೇವಣ್ಣ   

ಹಾಸನ: ನಗರದ ಖ್ಯಾತ ವೈದ್ಯ ಎ.ಸಿ. ಮುನಿವೆಂಕಟೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸೋಮವಾರ ಸಂಜೆ ಸಂಸದ ಎಚ್.ಡಿ. ದೇವೇಗೌಡರು ಪಡೆದರು.

ರಕ್ಷಣಾ ಪುರಂನಲ್ಲಿರುವ ಮೃತರ ನಿವಾಸಕ್ಕೆ ಬಂದ ಗೌಡರು, ತಮ್ಮ ಒಡನಾಡಿಯ ಅಗಲಿಕೆ ತಡೆಯಲಾಗದೆ ಭಾವುಕರಾದರು. ಸಚಿವ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಅವರು ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

‘ಕೋಲಾರ ಜಿಲ್ಲೆಯ ಕುಗ್ರಾಮವೊಂದರಲ್ಲಿ ಜನಿಸಿ ಹಾಸನದಲ್ಲಿ ಬಡವರ ಉದ್ಧಾರಕ್ಕೆ ಶ್ರಮಿಸಿದ ಮುನಿವೆಂಕಟೇಗೌಡರ ನಿಧನ ನೋವು ತಂದಿದೆ. ಅವರಿಗೆ ಯಾವುದೇ ವ್ಯಾಮೋಹ ಇರಲಿಲ್ಲ. ಹೋರಾಟದ ದಿನಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಬಡವರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ಸಂಜೀವಿನಿ ಸಹಕಾರಿ ಆಸ್ಪತ್ರೆ ಕಟ್ಟುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ’ ಎಂದು ದೇವೇಗೌಡರು ಪ್ರತಿಕ್ರಿಯಿಸಿದರು.

ADVERTISEMENT

ಮುನಿವೆಂಕಟೇಗೌಡರ ಇಚ್ಛೆಯಂತೆ ಅವರ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜಿಗೆ ದಾನ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

‘ಮಂಗಳವಾರ ಮಧ್ಯಾಹ್ನ ಹಾಸನದಿಂದ ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ತೆಗೆದುಕೊಂಡು ಹೋಗಿ ಮೈಸೂರು ಕಾಲೇಜಿಗೆ ಹಸ್ತಾಂತರಿಸಲಾಗುವುದು’ ಎಂದು ಪುತ್ರ ಡಾ. ವಸಂತ ಮಾಧವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.