
ಹಳೇಬೀಡು: ಜನಪದ ಶೈಲಿ ಹಾಗೂ ಧಾರ್ಮಿಕ ಹಿನ್ನೆಲೆಯ ನಂದಿ ಧ್ವಜ ಕುಣಿತ ಇಲ್ಲಿನ ಪುಷ್ಪಗಿರಿ ಕ್ಷೇತ್ರದ ಭಕ್ತಿ ಭಾವದ ಆಚರಣೆಗಳಲ್ಲಿ ಒಂದು. ಶೈವ ಕ್ಷೇತ್ರವಾದ ಪುಷ್ಪಗಿರಿಯಲ್ಲಿ ಒಂದಲ್ಲ ಒಂದು ಉತ್ಸವಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಲ್ಲಿ ನಡೆಯುವ ಕೆಂಡೋತ್ಸವ, ಕಾರ್ತಿಕ ಮಹೋತ್ಸವ, ರಥೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ನಂದಿಧ್ವಜ ಕುಣಿತದ ಮೆರುಗು ಹೆಚ್ಚಾಗಿರುತ್ತದೆ.
‘25 ಅಡಿ ಎತ್ತರದ ಅಂದಾಜು 50 ಕೆ.ಜಿ. ತೂಕದ ನಂದಿಧ್ವಜ ಹೊತ್ತವರು, ವಾದ್ಯಗಳ ತಾಳ, ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಾರೆ. ನಂದಿಯ ವಿಗ್ರಹ ಹಾಗೂ ಶೈವಧ್ವಜ ಹೊಂದಿರುವ ನಂದಿಧ್ವಜಕ್ಕೆ ಶಿವನ ಆರಾಧಕರು ಕೈಮುಗಿದು ಭಕ್ತಿ ಸಮರ್ಪಿಸುತ್ತಾರೆ. ಮನಸ್ಸನ್ನು ಕೇಂದ್ರೀಕರಿಸಿಕೊಂಡು ನಂದಿಧ್ವಜ ಕುಣಿತವನ್ನು ಭಕ್ತಿಯಿಂದ ವೀಕ್ಷಿಸುತ್ತಾರೆ’ ಎಂದು ಪುಷ್ಪಗಿರಿ ದಾಸೋಹ ಸಮಿತಿ ಕಾರ್ಯದರ್ಶಿ ಸಂಗಮ್ ಹೇಳಿದರು.
‘ನಂದಿಧ್ವಜ ಕುಣಿಯುವುದು ಸಾಮಾನ್ಯ ಕಲೆಯಲ್ಲ. ಇದೊಂದು ಶಕ್ತಿ ಪ್ರದರ್ಶನದ ಸಾಹಸ. ಹೊತ್ತು ಕುಣಿಯುವವರು ಬಲಶಾಲಿಗಳಾಗಿ ಇರಬೇಕು. ನಂದಿಧ್ವಜವನ್ನು ನೆಲಕ್ಕೆ ಬೀಳದಂತೆ ನೋಡಿಕೊಳ್ಳಬೇಕು. ಹೊತ್ತವರು ಉಯಿಲು ಹಿಡಿಯುವುದು ಸುಲಭ ಸಾಧ್ಯವಲ್ಲ. ಉತ್ತರ ಕರ್ನಾಟಕದ ಕಡೆ ದೊಡ್ಡದಾಗಿ ನಂದಿಧ್ವಜ ಕಟ್ಟುತ್ತಾರೆ. ಎರಡೂ ಕಡೆ ಹಗ್ಗ ಕಟ್ಟಿ ಇಬ್ಬರು ವ್ಯಕ್ತಿಗಳು ಹಿಡಿದು ಉಯಿಲು ಹಿಡಿಯುತ್ತಾರೆ. ಆದರೆ ನಮ್ಮಲ್ಲಿ ಒಬ್ಬರೇ ಹೊತ್ತು, ಉಯಿಲು ಹಿಡಿದು ಕುಣಿಯುವ ಪದ್ಧತಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಧ್ವಜ ಕೆಳಕ್ಕೆ ಬಿದ್ದರೆ ಅಪಶಕುನ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಂದಿಧ್ವಜ ಕಲಾವಿದ ಎಸ್.ಸಿ. ಪರ್ವತೇಗೌಡ.
‘ಧ್ವಜ ಹೊತ್ತು ಕುಣಿಯಲು ಹಲವು ಹೆಜ್ಜೆಗಳಿವೆ. ಒಂದೆಜ್ಜೆ, ಎರಡೆಜ್ಜೆ, ಮೂರೆಜ್ಜೆ, ನಾಲ್ಕೆಜ್ಜೆ, ತಟ್ಟಿ ಹೆಜ್ಜೆ, ಗೌಡೆಜ್ಜೆ ಹಾಗೂ ತಿರುಹಣಿ ಎಂಬ ಹೆಜ್ಜೆಗಳು ಕುಣಿತಕ್ಕೆ ತಕ್ಕಂತೆ ಗತ್ತು ನೀಡುತ್ತವೆ. ಗತ್ತುಗಳಿಗೆ ಅನುಸಾರವಾಗಿ ವಾದ್ಯದ ಬಡಿತದ ಲಯಗಳು ಬದಲಾಗುತ್ತವೆ. ನಂದಿಧ್ವಜ ಕುಣಿತಕ್ಕೆ ಗಟ್ಟಿಯಾದ ವಾದ್ಯಮೇಳ ಇರಬೇಕು. ಆದರೆ ಇಂದಿನ ವಾದ್ಯಗಳಿಗೆ ನಂದಿಧ್ವಜ ಕುಣಿತ ಹೊಂದಾಣಿಕೆ ಆಗುವುದಿಲ್ಲ. ಸಿನಿಮಾ ಹಾಡುಗಳಿಗೆ ಡಿಜೆ ಹಾಕಿಕೊಂಡು ಕುಣಿಯುವುದಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅವರು.
‘ಧ್ವಜಹೊತ್ತು ಕುಣಿಯಲು ಎಡಭುಜದಿಂದ ತೊಡೆಯವರೆಗೂ ಬರುವ ಗಟ್ಟಿಮುಟ್ಟಾದ ಪಟ್ಟಿ ಮಾಡಿಕೊಂಡಿರುತ್ತೇವೆ. ಕೆಳಗೆ ಚೀಲದಂತೆ ಧ್ವಜದ ಬುಡ ಕೂರುವ ವ್ಯವಸ್ಥೆ ಮಾಡಲಾಗಿರುತ್ತದೆ. ಪಟ್ಟಿಯ ಕೆಳಗಿನ ಚೀಲದ ಜಾಗಕ್ಕೆ ಧ್ವಜ ಸಿಕ್ಕಿಸಿದಾಗ ತೂಕ ಹೊತ್ತವರನ್ನು ಕೆಳಕ್ಕೆ ಜಗ್ಗಿಸುತ್ತದೆ. ಕೆಳಕ್ಕೆ ಕೂರದೇ ಬಲವಾಗಿ ನಿಂತು ವಾದ್ಯಕ್ಕೆ ತಕ್ಕಂತೆ ಕುಣಿಯಬೇಕು. ಧ್ವಜ ಹೊತ್ತು ಕುಣಿಯುವಾಗ ನೋಡುತ್ತಿರುವ ಕೆಲವು ಭಕ್ತರಲ್ಲಿ ಹುಮ್ಮಸ್ಸು ಹೆಚ್ಚಾಗುತ್ತದೆ. ಅವರು ಹೆಜ್ಜೆ ಹಾಕುವುದಲ್ಲದೇ, ಧ್ವಜ ಹೊತ್ತವರ ಕುಣಿತದ ವೇಗ ಹೆಚ್ಚುವಂತೆ ಹುಮ್ಮಸ್ಸು ಬರಿಸುತ್ತಾರೆ. ಬಲವಾಗಿ ಧ್ವಜ ಹಿಡಿದು ಕುಣಿಯಬೇಕು’ ಎಂದು ಧ್ವಜ ಹೊರುವ ವ್ಯಕ್ತಿ ಎಸ್.ಈ.ರಾಜಕುಮಾರ ಹೇಳಿದರು.
‘ಹಿಂದೆ ಮರದ ಗಣಕ್ಕೆ 22 ಹಿತ್ತಾಳೆಯ ಧ್ವಜದ ಕಾಯಿಗಳನ್ನು ಜೋಡಿಸುತ್ತಿದ್ದರು. ಈಗ 18 ಕಾಯಿಗಳನ್ನು ಜೋಡಿಸಲಾಗುತ್ತಿದೆ. ತುದಿಯಲ್ಲಿ ಗೋಪುರ ಜೋಡಿಸಿ ಶೈವ ಬಾವುಟವನ್ನು ಕಟ್ಟಲಾಗುತ್ತದೆ. ಮರದ ಗಣದ ಬುಡದಿಂದ 5 ಅಡಿ ಎತ್ತರದಲ್ಲಿ ಧ್ವಜ ಹೊತ್ತವರ ಎದೆ ಭಾಗಕ್ಕೆ ಬರುವಂತೆ ನಂದಿ ವಿಗ್ರಹವನ್ನು ಆರೋಹಣ ಮಾಡಲಾಗುತ್ತದೆ. ಧ್ವಜ ಹೊತ್ತವರು ಕುಣಿದಾಗ ಹಿತ್ತಾಳೆಯ ಧ್ವಜದ ಕಾಯಿಗಳು ಒಂದೊಂದು ತಾಗಿ ಬರುವ ಸಪ್ಪಳ ವಿಶಿಷ್ಟವಾಗಿ ಕೇಳುತ್ತದೆ. ಸ್ನಾನ ಮಾಡಿ ಶ್ವೇತ ಉಡುಪು ಧರಿಸಿಕೊಂಡು ಧ್ವಜ ಹೊತ್ತು ಕುಣಿಯುತ್ತಾರೆ’ ಎಂದು ಸಂಗಮ್ ವಿವರಿಸಿದರು.
ವಿಜಯದ ಸಂಕೇತ
ಇತಿಹಾಸದಲ್ಲಿ ಬಹುತೇಕ ಶೈವರು ರಾಜ್ಯವಾಳಿ ಗೆದ್ದವರಾಗಿದ್ದಾರೆ. ಶೈವ ರಾಜರು ಗೆದ್ದಾಗ ನಡೆದ ವಿಜಯೋತ್ಸವದಲ್ಲಿ ನಂದಿಧ್ವಜ ಕುಣಿತ ಮೆರಗು ನೀಡುತ್ತಿತ್ತು. ಶೈವ ದೇವಾಲಯಗಳ ಜಾತ್ರೆ ಉತ್ಸವಗಳಲ್ಲಿ ನಂದಿಧ್ವಜ ಇದ್ದರಷ್ಟೇ ವೈಭವ ಕಾಣಲು ಸಾಧ್ಯ. ನಂದಿಧ್ವಜ ಶೈವ ಸಂಸ್ಕೃತಿಯ ಘನತೆ ಗೌರವದ ಸಂಕೇತ. ಪ್ರಾಚೀನ ಕಲೆ ಸಂಸ್ಕೃತಿ ಎತ್ತಿ ಹಿಡಿದಿರುವ ನಂದಿ ಧ್ವಜ ಗ್ರಾಮೀಣ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಪಸರಿಸುತ್ತಿದೆ. ಈಚೆಗೆ ನಗರದಲ್ಲಿ ನಡೆಯುವ ಸಮ್ಮೇಳನಗಳ ಮೆರವಣಿಗೆಗೂ ಮೆರುಗು ನೀಡುತ್ತಿದೆ. ಮೂಲ ಪೂರ್ವ ದ್ರಾವಿಡ ಹಾಗೂ ದ್ರಾವಿಡ ಸಂಸ್ಕೃತಿಗಳ ಸಮ್ಮಿಲನವಾಗಿ ಆಧುನಿಕ ಕಾಲದಲ್ಲಿಯೂ ಕಲೆಯನ್ನು ಶಿವನ ದೇವಾಲಯದಲ್ಲಿ ಉಳಿಸಿಕೊಂಡು ಬಂದಿದ್ದಾರೆ ಎಂಬ ಮಾಹಿತಿಯನ್ನು ಹಿರಿಯರಿಂದ ಕೇಳಿದ್ದೇವೆ. ಆಧುನಿಕ ಕಾಲದಲ್ಲಿಯೂ ಉಳಿದಿರುವ ಪರಂಪರೆಯ ಕಲೆಯಾಗಿದೆ ಎಂದು ಇತಿಹಾಸ ಪ್ರಾಧ್ಯಾಪಕ ಎಚ್.ಎಂ. ಬಸವರಾಜು ಹೇಳಿದರು.
ಪುಷ್ಪಗಿರಿಯ ನಂದಿಧ್ವಜ ಕುಣಿತಕ್ಕೆ ಶತಮಾನಗಳ ಇತಿಹಾಸವಿದೆ. ಹೊಯ್ಸಳರ ಕಾಲದಲ್ಲಿ ದೇವಾಲಯ ಆರಂಭವಾದ ದಿನದಿಂದಲೂ ಆಚರಣೆ ನಡೆದು ಬಂದಿರಬಹುದುಸಂಗಮ್ ಪುಷ್ಪಗಿರಿ, ದಾಸೋಹ ಸಮಿತಿ ಕಾರ್ಯದರ್ಶಿ
ಪುರಾತನ ಕಾಲದ ಸಾಕಷ್ಟು ಕಲೆ ಸಂಸ್ಕೃತಿ ನಶಿಸಿ ಹೋಗುತ್ತಿವೆ. ಪುಷ್ಪಗಿರಿ ದೇವಾಲಯದಲ್ಲಿ ಸ್ಥಳೀಯರು ನಂದಿಧ್ವಜ ಕುಣಿತ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯಎಚ್.ಆರ್. ಕಲ್ಲೇಶ್, ಪ್ರವಾಸಿ ಮಾರ್ಗದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.