ADVERTISEMENT

‘ಸಮುದಾಯ ಆರೋಗ್ಯಕ್ಕೆ ಒತ್ತು ನೀಡಿ’

ರಾಜೀವ್ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:43 IST
Last Updated 3 ಡಿಸೆಂಬರ್ 2022, 14:43 IST
ಹಾಸನದ ರಾಜೀವ್‌ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಕಾರ್ಯಾಗಾರವನ್ನು ಡಾ.ಎಂ.ಪಿ. ಅಶೋಕ್‌ಗೌಡ ಉದ್ಘಾಟಿಸಿದರು.
ಹಾಸನದ ರಾಜೀವ್‌ ಆಯುರ್ವೇದ ಮಹಾವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಕಾರ್ಯಾಗಾರವನ್ನು ಡಾ.ಎಂ.ಪಿ. ಅಶೋಕ್‌ಗೌಡ ಉದ್ಘಾಟಿಸಿದರು.   

ಹಾಸನ: ನಗರದ ಬಿ.ಎಂ. ಬೈಪಾಸ್ ರಸ್ತೆಯ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರ ಮಟ್ಟದ ಗುದ ಸಂಬಂಧಿ ಕಾಯಿಲೆಗಳ ಶಸ್ತ್ರಚಿಕಿತ್ಸಾ ಕಾರ್ಯಾಗಾರ ಮತ್ತು ವಿಚಾರ ಸಂಕಿರಣವನ್ನು ಶನಿವಾರ ಮಂಗಳಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ.ಪಿ. ಅಶೋಕ್ ಗೌಡ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಯುರ್ವೇದ ಅಥವಾ ಅಲೋಪತಿ ಪದವಿ ಎಂಬುವುದು ಮುಖ್ಯವಲ್ಲ. ಒಬ್ಬ ವೈದ್ಯ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ, ರೋಗಿಯ ಅಂತರಾಳವನ್ನು ಅರಿತು, ರೋಗಿಗೆ ಆರ್ಥಿಕ ಹೊರೆಯನ್ನು ಕೊಡದೇ ಮಾನವೀಯ ಮೌಲ್ಯಗಳಿಂದ ಚಿಕಿತ್ಸೆ ನೀಡಬೇಕು. ವೈದ್ಯ ಕೇವಲ ಔಷಧಿ ನೀಡುವುದಕ್ಕೆ ಸೀಮಿತವಾಗಿರದೇ ಸಮುದಾಯದ ಆರೋಗ್ಯಕ್ಕೆ ಹೆಚ್ಚಿನ ಒತ್ತನ್ನು ನೀಡಲು ಬದ್ಧನಾಗಿರಬೇಕು ಎಂದು ತಿಳಿಸಿದರು.

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ನರಸಿಂಹರಾವ್ ಮಾತನಾಡಿ, 5 ಸಾವಿರ ವರ್ಷಗಳ ಹಿಂದೆಯೇ ಸುಶ್ರುತಾಚಾರ್ಯರು ಗುದಗತ ಶಸ್ತ್ರಚಿಕಿತ್ಸೆಯನ್ನು ಹೇಳಿದ್ದಾರೆ. ಗುದಗತ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಹೆಚ್ಚಿದ್ದು, ವೈದ್ಯರು ಯಶಸ್ವಿಯಾಗಿ ನಿಭಾಯಿಸಲು ಕುಶಲತೆ ಮುಖ್ಯ ಎಂದರು.

ADVERTISEMENT

ಹಾಸನ ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀಣಾಲತಾ ಮಾತನಾಡಿ, ಮೂರು ವರ್ಷದಿಂದ ರಾಜೀವ್ ಆಯುರ್ವೇದ ಆಸ್ಪತ್ರೆ ನೀಡುತ್ತಿರುವ ಉಚಿತ ಆರೋಗ್ಯ ಸೇವೆ ಶ್ಲಾಘನೀಯ. ಆರು ತಿಂಗಳಿನಿಂದ ಆಕಾಶವಾಣಿ ಹಾಸನದಲ್ಲಿ ಪ್ರಸಾರವಾಗುತ್ತಿರುವ ರಾಜೀವ್ ವೈದ್ಯವಾಣಿ ಕಾರ್ಯಕ್ರಮ ಯಶಸ್ವಿಯಾಗಿ ಪ್ರತಿ ಮನೆಗೂ ತಲುಪುತ್ತಿದೆ. ರಾಜೀವ್ ವೈದ್ಯಕೀಯ ಸಂಸ್ಥೆ ವಿದ್ಯಾರ್ಜನೆಯ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಹೊಂದಿರುವುದು ಪ್ರಶಂಸನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಡಾ.ರಚನಾ ರಾಜೀವ್ ಮಾತನಾಡಿ, ಶಸ್ತ್ರಚಿಕಿತ್ಸಾ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳು ಹೆಚ್ಚು ನಡೆದಂತೆ ವಿಚಾರ ವಿನಿಮಯವಾಗುತ್ತದೆ. ಹಳೆಯ ವಿಚಾರಗಳ ಜೊತೆಗೆ ಹೊಸ ಅವಿಷ್ಕಾರಗಳ ಬಗ್ಗೆ ಮಾಹಿತಿ ಸಂಶೋಧನಾ ತಜ್ಞರಿಂದದ ದೊರೆಯುತ್ತದೆ ಎಂದು ವಿವರಿಸಿದರು.

ಗದಗ ಡಿಜಿಎಂ ಆಯುರ್ವೇದ ಆಸ್ಪತ್ರೆಯ ಹೆಸರಾಂತ ಶಸ್ತ್ರಚಿಕಿತ್ಸಕ ಡಾ.ಎಂ.ಡಿ. ಸಾಮುದ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ. ನಿತಿನ್ ಸ್ವಾಗತಿಸಿದರು. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್. ಪ್ರದೀಪ ವಂದಿಸಿದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಡ್ರ ರಾಜ್ಯಗಳ 26 ಕಾಲೇಜುಗಳಿಂದ 300 ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಚಿಕಿತ್ಸಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.