ADVERTISEMENT

ಮುಂದಿನ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧೆ: ಎ. ಮಂಜು

ಕೀಳು ಮಟ್ಟದ ಪದ ಬಳಕೆ ಶೋಭೆ ತರುವುದಿಲ್ಲ; ಟೀಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 15:29 IST
Last Updated 29 ಡಿಸೆಂಬರ್ 2020, 15:29 IST
ಎ. ಮಂಜು
ಎ. ಮಂಜು   

ಹಾಸನ: ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್‍ನಿಂದ ಸ್ಪರ್ಧಿಸುತ್ತೇನೆಂಬ ವದಂತಿಗಳಿಗೆ ಯಾರೂ ಕಿಡಿಗೊಡಬೇಡಿ. ಬಿಜೆಪಿ ಕಾರ್ಯಕರ್ತನಾಗಿ ಬೇರೆ ಪಕ್ಷದಿಂದ ಸ್ಪರ್ಧೆ ಹೇಗೆ ಸಾಧ್ಯ? ಅರಕಲಗೂಡು ಕ್ಷೇತ್ರದಿಂದ ಬಿಜೆಪಿಯಿಂದಲೇ ಕಣಕ್ಕಿಳಿಯುತ್ತೇನೆ ಎಂದು ಬಿಜೆಪಿ ಮುಖಂಡ ಎ.ಮಂಜು ಸ್ಪಷ್ಟಪಡಿಸಿದರು.

ಈ ವರೆಗೂ ಒಂಬತ್ತು ಚುನಾವಣೆ ಎದುರಿಸಿದ್ದು, ನನಗೂ ರಾಜಕೀಯ ಸಾಕೆನಿಸಿದೆ. ಲೋಕಸಭೆ ಚುನಾವಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಜನವರಿಯಲ್ಲಿ ತೀರ್ಪು ಹೊರಬೀಳಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಜತೆಗೆ ಜೆಡಿಎಸ್ ವಿಲೀನವಾಗುತ್ತದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ಏನೂ ಹೇಳಲು ಸಾಧ್ಯವಿಲ್ಲ. ಜೆಡಿಎಸ್ ಯಾವ ಕಾರಣಕ್ಕೂ ನೇರ ಅಧಿಕಾರ ನಡೆಸುವುದಿಲ್ಲ. ಈವರೆಗೂ ಬಹುಮತ ಪಡೆದು ಸ್ವಾತಂತ್ರ್ಯವಾಗಿ ಅಧಿಕಾರ ಹಿಡಿದಿಲ್ಲ. ರಾಷ್ಟ್ರೀಯ ಪಕ್ಷಗಳ ಸಹವಾಸ ಬೇಡ ಎನ್ನುವ ರೇವಣ್ಣ 2006 ರಲ್ಲಿ ಮಂತ್ರಿಯಾಗಿದ್ದು, ಕುಮಾರಸ್ವಾಮಿ ಅವರು ಸಿ.ಎಂ ಆಗಿದ್ದು ಬಿಜೆಪಿ ನೆರವಿನಿಂದಲೇ ಎಂಬುದನ್ನು ಮರೆಯಬಾರದು’ ಎಂದರು.

ADVERTISEMENT

ದೇವೇಗೌಡರು ಬದುಕಿರುವವರೆಗೆ ಬಿಜೆಪಿ ಜತೆಗೆ ವಿಲೀನವಾಗುವುದಿಲ್ಲ ಎನ್ನುತ್ತಾರೆ. ಹಾಗಾದರೆ ನಂತರದ ನಿರ್ಧಾರ ಏನು ಎಂದು ಪ್ರಶ್ನಿಸಿದರು.

‘ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಶಾಸಕ ರೇವಣ್ಣ ಕೀಳು ಮಟ್ಟದ ಪದ ಬಳಕೆ ಶೋಭೆ ತರುವುದಿಲ್ಲ. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ರೇವಣ್ಣ ಬಿಡುತ್ತಿಲ್ಲ. ವೈಯಕ್ತಿಕ ಕೆಲಸಗಳಿಗೆ ಏನಾದರೂ ಅಡೆತಡೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡುತ್ತಾರೆ’ ಎಂದು ಆರೋಪಿಸಿದರು.

‘ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ಪರಿಷತ್‍ನಲ್ಲಿ ಈಚೆಗೆ ನಡೆದ ಗಲಾಟೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದನ್ನು ಒಪ್ಪುವುದಿಲ್ಲ. ಡೆತ್ ನೋಟ್ ಸಿಕ್ಕಿದ್ದು, ಎರಡು ದಿನಗಳಲ್ಲಿ ಸಾವಿನ ಸತ್ಯ ತಿಳಿಯಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.