ADVERTISEMENT

ಪಕ್ಷ ಸಂಘಟಿಸಲು ರಾಜ್ಯಾದ್ಯಂತ ಪ್ರವಾಸ: ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 14:08 IST
Last Updated 4 ಸೆಪ್ಟೆಂಬರ್ 2021, 14:08 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹಾಸನ: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಪ್ರವಾಸ
ಮಾಡಲಾಗುವುದು. ‍ಪಕ್ಷದ ಸದಸ್ಯತ್ವ ಇಲ್ಲದವರಿಗೆ ಬಿ ಫಾರಂ ಕೊಡುವುದಿಲ್ಲ ಎಂದು ಜೆಡಿಎಸ್‌ ವರಿಷ್ಠಎಚ್.ಡಿ.ದೇವೇಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ಹಲವು ನಾಯಕರು ಟಿಕೆಟ್‌ ಹಂಚಿಕೆ ಕುರಿತು ನನ್ನ ಜತೆ ಚರ್ಚಿಸಿದ್ದಾರೆ.ಎಲ್ಲಾ ಜಿಲ್ಲೆಯಲ್ಲೂ ಪಕ್ಷದ ಸದಸ್ಯತ್ವ ಅಭಿಯಾನ ಶುರುವಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತೇನೆ.ಎಚ್.ಡಿ.ಕುಮಾರಸ್ವಾಮಿ ಅವರೂ ಪ್ರವಾಸ ಮಾಡುತ್ತಿದ್ದಾರೆ. ಎದುರಾಳಿಗಳು ಜೆಡಿಎಸ್ ಉಳಿಯುತ್ತೋ, ಇಲ್ಲವೋ ಎಂದು ಟೀಕಿಸುತ್ತಾರೆ. ನಾನು ಹುಟ್ಟು ಹೋರಾಟಗಾರ, ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ವಯಸ್ಸಾಯಿತು ಎಂದು ಸೋಮಾರಿತನ ತೋರಿ ಕೂರುವ ವ್ಯಕ್ತಿ ನಾನಲ್ಲ’ ಎಂದು ಹೇಳಿದರು.

ಅನೇಕ ಪ್ರಮುಖ ವಿಚಾರಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಲು ನಿರ್ಧರಿಸಿದ್ದೆ. ಆದರೆ ಚರ್ಚೆಗೆ ಅವಕಾಶ ಸಿಗಲಿಲ್ಲ. ಕೇಂದ್ರ ಸರ್ಕಾರ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಅನುದಾನ ನೀಡಿಲ್ಲ. ಪ್ರತಿ ವರ್ಷ ₹5 ಕೋಟಿ ಕೊಡುತ್ತಿದ್ದರು. ಕೊರೊನಾ ಕಾರಣದಿಂದ ಈ ವರ್ಷ ₹75 ಲಕ್ಷ ಬಿಡುಗಡೆ ಮಾಡಿದ್ದಾರೆ. ಹಿಂದಿನ ವರ್ಷದ್ದು ₹3.5 ಕೋಟಿ ಬಾಕಿ ಇದೆ. ಇದರಿಂದ ಅಭಿವೃದ್ಧಿ ಕೆಲಸಕ್ಕೆ ತೊಡಗಾಗಿದೆ. ಈ ಎಲ್ಲಾ ವಿಚಾರದ ಬಗ್ಗೆಯೂ ಮಾತನಾಡಲು ಅವಕಾಶ ಕೊಡಲಿಲ್ಲ. ಆದರೂ ಪ್ರಧಾನಿ ಅವರಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ADVERTISEMENT

‘ಅಧಿವೇಶನದಲ್ಲಿ ಮೂರು ಬಿಲ್ ಪಾಸ್ ಮಾಡಿದ್ದಾರೆ. ಇದಕ್ಕೂ ಮುನ್ನ ಚರ್ಚೆ ಮಾಡಬೇಕಿತ್ತು. ಆದರೆ ಬರೀ ಗದ್ದಲದಲ್ಲಿ ಸಂಸತ್ ಅಧಿವೇಶನ ಮುಗಿಯುತ್ತಿರುವುದು ಉತ್ತಮ ನಡೆಯಲ್ಲ. ಕೃಷಿ ಕಾಯ್ದೆ ವಿಚಾರದಲ್ಲಿ ಸರ್ಕಾರ ಹಠಮಾರಿ ಧೋರಣೆ ತೋರುತ್ತಿದೆ. ಹರಿಯಾಣದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ನಡೆದಿದೆ. ರೈತರೊಂದಿಗೆ ಕುಳಿತು ಚರ್ಚಿಸಿ ಸಮನ್ವಯ ಕಾಪಾಡಬೇಕು. ಸಂಸತ್ತಿನಲ್ಲಿ ನಮ್ಮನ್ನು ನೋಡಿ ಕಿರಿಯರು ಕಲಿಯಬೇಕು. ಆದರೆ ನಾವೇ ಕೈಕೈ ಮಿಲಾಯಿಸುವ ಹಂತಕ್ಕೆ ಹೋದರೆ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತದೆ’ ಎಂದು ಎಚ್ಚರಿಸಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂಧನ ಮೇಲಿನ ತೆರಿಗೆ ಇಳಿಸುವಂತೆ ಸಚಿವರು ಒತ್ತಾಯ ಮಾಡಿರುವ ಕುರಿತ ಪ್ರಶ್ನೆಗೆ, ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನತೆರಿಗೆ ರದ್ದು ಮಾಡುವ ಅಧಿಕಾರ ಇದೆ. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಯಿದ್ದರೆ, ಕೇಂದ್ರ ರಿಯಾಯಿತಿ ಕೊಡದಿದ್ದರೂ ಕಡಿಮೆ ಮಾಡಬಹುದು. ಆದರೆ ಸಮಸ್ಯೆ ಸಾಕಷ್ಟಿವೆ. ಅನೇಕ ಇಲಾಖೆಯೊಳಗೆ ಹಣ ಬಿಡುಗಡೆ ಬಾಕಿ ಇದೆ. ಕೇಂದ್ರದಲ್ಲೂ ಸಮಸ್ಯೆ ಇದೆ ಎಂದು ಹೇಳಿದರು.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ ಮಾಡಿದ್ದಾರೆ.ಅನೇಕ ಕಡೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಎಷ್ಟು ಜನ ಇದ್ದರು ಎಂಬುದನ್ನು ಗಮನಿಸಿದರೆ ನಿಮಗೆ ತಿಳಿಯಲಿದೆ ಎನ್ನುವ ಮೂಲಕ ಬಿಜೆಪಿ ಸಭೆಗೆ ಅಷ್ಟೊಂದು ಮಹತ್ವ ಇಲ್ಲ ಎಂದು ಪರೋಕ್ಷವಾಗಿ ಹೇಳಿದರು.

ಅಲ್ಲದೆ ‘ಜೆಡಿಎಸ್ ಪಕ್ಷ ಮುಳುಗುತ್ತಿದೆ’ ಎಂಬ ಅರಣ್ ಸಿಂಗ್ ಹೇಳಿಕೆಗೆ, ಆ ಬಗ್ಗೆಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರಲ್ಲ ಎಂದಷ್ಟೇ ಹೇಳಿ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.