ADVERTISEMENT

ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 14:52 IST
Last Updated 18 ಅಕ್ಟೋಬರ್ 2021, 14:52 IST
 ಎಚ್.ಡಿ.ರೇವಣ್ಣ
 ಎಚ್.ಡಿ.ರೇವಣ್ಣ   

ಹಾಸನ: ‘ಹಾನಗಲ್‌, ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೆ ಹೊಂದಾಣಿಕೆ
ಮಾಡಿಕೊಂಡಿಲ್ಲ. ಅದರ ಅವಶ್ಯಕತೆ ಜೆಡಿಎಸ್‌ಗೆ ಇಲ್ಲ’ ಎಂದು ಶಾಸಕ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

‘ಅಧಿಕಾರಕ್ಕಾಗಿ ಕಾಂಗ್ರೆಸ್‌ ಯಾರ ಮನೆ ಬಾಗಿಲಿಗೆ ಬೇಕಾದರೂ ಹೋಗಲು ಸಿದ್ಧವಿದೆ. ಕೋಮುವಾದಿಗಳ ಜತೆ ಸೇರಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಎಚ್.ಡಿ.ದೇವೇಗೌಡ ಮತ್ತು ಮಂಡ್ಯದಲ್ಲಿ ನಿಖಿಲ್‌
ಕುಮಾರಸ್ವಾಮಿ ಅವರನ್ನು ಸೋಲಿಸಿದರು. ಮೊದಲೇತಿಳಿಸಿದ್ದರೆಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ.
ಸ್ವತಂತ್ರವಾಗಿ ಸ್ಪರ್ಧಿಸಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದೇವು. ಸಿಂದಗಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ
ಅಭ್ಯರ್ಥಿ ಕಣಕ್ಕಿಳಿಸಿರುವುದು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ
ಹೇಳಿದರು.

‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದಾಗ ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸಿದ್ದಾರೆ. ಸಿ.ಎಂ.ಇಬ್ರಾಹಿಂ ಅವರನ್ನು ಗೌಡರು ಕೇಂದ್ರ ಸಚಿವರನ್ನಾಗಿ ಮಾಡಿದ್ದರು. ರೋಷನ್‌ ಬೇಗ್‌ ಅವರಿಗೂ ಸೂಕ್ತ ಸ್ಥಾನಮಾನ ನೀಡಲಾಗಿತ್ತು. ಹಿರಿಯ ರಾಜಕಾರಣಿ ಗುಲಾಂ ನಬಿ ಅಜಾದ್‌ ಅವರನ್ನು ಕಾಂಗ್ರೆಸ್‌ ಮೂಲೆ ಗುಂಪು ಮಾಡಿದೆ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅವರ ಸೋಲಿಗೆ ಕಾರಣ ಯಾರು? ಲಾಲೂಪ್ರಸಾದ್‌ ಯಾದವ್‌ ಅವರನ್ನು ಜೈಲಿಗೆ ಕಳುಹಿಸಿದ್ದು ಯಾರು ಎಂಬುದು ಎಲ್ಲರಿಗೂ ಗೊತ್ತು. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ಇಲ್ಲ. ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಭಯ ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಉಪ ಚುನಾವಣೆಯಲ್ಲಿ ಯಾವ ಪಕ್ಷದ ಜತೆಯೂ ಎಚ್‌.ಡಿ.ಕುಮಾರಸ್ವಾಮಿ ಡೀಲ್‌ ಮಾಡಿಕೊಂಡಿಲ್ಲ. ಕುಮಾರಸ್ವಾಮಿ ಬಳಿ ಅನುಕೂಲ ಪಡೆದುಕೊಂಡವರೇ ಇಂದು ಅವರನ್ನು ಟೀಕಿಸುತ್ತಿದ್ದಾರೆ. ಯಾರು ಡೀಲ್ಮಾಡುತ್ತಿದ್ದಾರೆ ಹಾಗೂ ಪರ್ಸೆಂಟೇಜ್‌ ಪಡೆಯುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುವೆ ಎಂದುಪರೋಕ್ಷವಾಗಿ ಜಮೀರ್ ಅಹಮದ್‌ ವಿರುದ್ಧ ವಾಗ್ದಾಳಿ’ ನಡೆಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದರು. ಅವರ ಕೊಡುಗೆ ಜಿಲ್ಲೆಗೆ ಸಿಎಲ್‌–7 ಅಷ್ಟೇ. ಜಿಲ್ಲೆಯಲ್ಲಿ ನಿತ್ಯ ಒಂದು ಕೋಟಿ ರೂಪಾಯಿಗೂ ಅಧಿಕ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಹಳ್ಳಿಗಳಲ್ಲಿ ಪೆಟ್ಟಿಗೆ ಅಂಗಡಿ, ಟೀ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಳೆ, ಅಂಗಮಾರಿ ರೋಗದಿಂದ ಆಲೂಗಡ್ಡೆಬೆಳೆಗಾರರಿಗೆ ₹ 120 ಕೋಟಿ ನಷ್ಟವಾಗಿದೆ. ಮೆಕ್ಕೆಜೋಳದ ದರ ₹ 1800 ರಿಂದ ₹ 1200ಕ್ಕೆ ಕುಸಿದಿದೆ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್‌ಗೆ ಸರ್ಕಾರ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.