ADVERTISEMENT

ನುಗ್ಗೇಹಳ್ಳಿ: ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:55 IST
Last Updated 18 ನವೆಂಬರ್ 2025, 4:55 IST
ನುಗ್ಗೇಹಳ್ಳಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು
ನುಗ್ಗೇಹಳ್ಳಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು   

ನುಗ್ಗೇಹಳ್ಳಿ: ‘ಹೋಬಳಿಯ ಚಿನ್ನೇನಹಳ್ಳಿಯ ಕಾವಲು ಹೊಸೂರು, ಬದ್ದಿಕೆರೆ ಹೊರಗಿನ 4.50 ಕಿ.ಮೀ ರಸ್ತೆಯನ್ನು ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಹೋಬಳಿಯ ಚಿನ್ನೇನಹಳ್ಳಿಯಲ್ಲಿ ₹5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮಸ್ಥರ ಹಲವು ವರ್ಷಗಳ ಒತ್ತಾಯದಂತೆ ಚಿನ್ನೇನಹಳ್ಳಿಯಿಂದ ನುಗ್ಗೇಹಳ್ಳಿ- ಹಿರೀಸಾವೆ ಮುಖ್ಯ ರಸ್ತೆಯ ಕಾವಲು ಹೊಸೂರು ಗೇಟ್‌ವರೆಗೆ ಹಾಗೂ ಚಿನ್ನೇನಹಳ್ಳಿಯಿಂದ ಬದ್ದಿಕೆರೆವರೆಗಿನ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ADVERTISEMENT

ಚಿನ್ನೇನಹಳ್ಳಿಯಲ್ಲಿ ಡೇರಿ ಕಟ್ಟಡ ಸೇರಿದಂತೆ ದೇವಾಲಯ ನಿರ್ಮಾಣಕ್ಕೆ ಹಾಗೂ ರಸ್ತೆ ಕುಡಿಯುವ ನೀರು ವ್ಯವಸ್ಥೆಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ತೋಟಿ ಏತ ನೀರಾವರಿ ಯೋಜನೆ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ಚಿನ್ನನಹಳ್ಳಿ ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸಿ ತುಂಬಿಸಲು ಹೆಚ್ಚು ಶ್ರಮ ವಹಿಸುವುದಾಗಿ ತಿಳಿಸಿದರು.

ಜೆಡಿಎಸ್ ಯುವ ಮುಖಂಡ ರಾಮ ಮಾತನಾಡಿ, ಗ್ರಾಮದಲ್ಲಿ ರಸ್ತೆ ಸೇರಿದಂತೆ ದೇವಾಲಯ ನಿರ್ಮಾಣಕ್ಕೆ ಶಾಸಕರು ಹೆಚ್ಚಿನ ಅನುದಾನ ನೀಡಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಗ್ರಾಮದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚಿನ ಸಾಲ ಕೊಡಿಸಿದ್ದಾರೆ’ ಎಂದರು.

ಮುಖಂಡರಾದ ನಾಗೇಂದ್ರ ಬಾಬು, ಗ್ರಾ.ಪಂ ಅಧ್ಯಕ್ಷ ಜಯಲಕ್ಷ್ಮಿ ಶಂಕರ್, ಮಾಜಿ ತಾ.ಪಂ ಸದಸ್ಯ ಟಿ.ಪಿ.ಗಂಗಾಧರ್, ಮಾಜಿ ಗ್ರಾ.ಪಂ ಉಪಾಧ್ಯಕ್ಷ ರಾಜಪುರ ಮನು, ಪ್ರಮುಖರಾದ ಕಾವಲು ಹೊಸೂರು ಅಶೋಕ್, ಪಾರ್ಥಸಾಥಿ, ಹುಲಿಕೆರೆ ಸಂಪತ್ ಕುಮಾರ್, ಕಾವಲು ಹೊಸೂರು ಗೋಪಿ, ಗುತ್ತಿಗೆದಾರ ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.