ADVERTISEMENT

ಹಾಸನ| ಕೋವಿಡ್ ಸೋಂಕು ಪ್ರಕರಣ ಸಂಖ್ಯೆ 886ಕ್ಕೆ ಏರಿಕೆ

ಕೋವಿಡ್‌ಗೆ ಮಹಿಳೆ ಸಾವು: ಮೃತರ ಸಂಖ್ಯೆ 28ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:14 IST
Last Updated 19 ಜುಲೈ 2020, 16:14 IST

ಹಾಸನ: ಒಂದು ವರ್ಷದ ಮಗು ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ 41 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 886ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಇದುವರೆಗೆ 28 ಜನರು ಮೃತಪಟ್ಟಿದ್ದು, 18 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 553 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಸಕ್ರಿಯ ಪ್ರಕರಣಗಳು 305ಕ್ಕೆ ಏರಿದೆ. ಆಲೂರು, ಅರಕಲಗೂಡು ಹಾಗೂ ಹೊಳೆನರಸೀಪುರದಲ್ಲಿ ತಲಾ 1, ಸಕಲೇಶಪುರ 2, ಚನ್ನರಾಯಪಟ್ಟಣ 5, ಅರಸೀಕೆರೆ 8 ಮತ್ತು ಹಾಸನದಲ್ಲಿ 21 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಎಲ್ಲರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಜುಲೈ 12 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರಿಗೆ ಸೋಂಕು ದೃಢಪಟ್ಟಿತ್ತು. ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್‌ ತಿಳಿಸಿದರು.

ಹಾಸನದಲ್ಲಿ ಸೋಂಕಿತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಮಂಗಳೂರು ಪ್ರಯಾಣದ ಇತಿಹಾಸ ಹೊಂದಿರುವವರು, ಪಿ 37053 ಜತೆಗೆ ಸಂಪರ್ಕ ಹೊಂದಿದ್ದ 1 ವರ್ಷದ ಮಗು, ಪಿ 37042 ರೋಗಿ ಜತೆಗಿದ್ದ 26 ವರ್ಷದ ಯುವಕ, ಯುವತಿ ಹಾಗೂ ಬೆಂಗಳೂರಿನಿಂದ ಮರಳಿದ್ದ ಇಬ್ಬರು ಯುವಕರು, ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಇಬ್ಬರು ಮತ್ತು ಶೀತ ಜ್ವರ ಮಾದರಿಯ ಅನಾರೋಗ್ಯ ಇರುವವರಿಗೆ ಸೋಂಕು ಕಾಣಿಸಿಕೊಂಡಿದೆ. ಎರಡು ಪ್ರಕರಣದಲ್ಲಿ ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.