
ಹಾಸನ: ‘ಓಬವ್ವ ಜಯಂತಿ ಆಚರಿಸುವ ವೇಳೆ ರೋಮಾಂಚನ ಆಗುತ್ತದೆ. ಓಬವ್ವಳ ಧೈರ್ಯ, ಶಕ್ತಿ, ಸಾಹಸ ದೇಶದ ಹೆಣ್ಣು ಮಕ್ಕಳಲ್ಲಿ ಪ್ರೇರಕವಾಗಿದ್ದು, ಹೆಣ್ಣು ಮಕ್ಕಳ ಸಬಲೀಕರಣದ ಪ್ರತೀಕವಾಗಿ ಓಬವ್ವ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ನೂರಾರು ಸೈನಿಕರನ್ನು ಸದೆ ಬಡೆದ ಓಬವ್ವಳ ಸಮಯಪ್ರಜ್ಞೆ ಇಂದಿಗೂ ಮೆಚ್ಚುವಂಥದ್ದು. ಇಂದು ಹೆಣ್ಣು ಮಕ್ಕಳು ಒನಕೆ ಬದಲು ಪೆನ್ನು ಹಿಡಿಯಬೇಕು. ಅದೇ ನಿಜವಾದ ಶಕ್ತಿ’ ಎಂದರು.
‘ಹೆಣ್ಣು ಮಕ್ಕಳು ದುರ್ಬಲರಲ್ಲ. ಅಗಾಧ ಶಕ್ತಿ ಇರುವವರಾಗಿದ್ದಾರೆ. ಅಂದಿನ ಕಾಲದಲ್ಲಿ ದುಷ್ಟರನ್ನು ಸದೆ ಬಡಿದು ಹೋರಾಟಕ್ಕೆ ಹೊಸ ನಾಂದಿ ಹಾಡಿದರು. ಓಬವ್ವ ಹೆಸರನ್ನು ಶಿಲಾಶಾಸನದಲ್ಲಿ ಕೆತ್ತಿಲ್ಲ. ಆದರೂ ನೂರಾರು ವರ್ಷ ಕಳೆದರೂ ಜನರ ಬಾಯಲ್ಲಿ ಇಂದಿಗೂ ಉಳಿದಿದ್ದಾರೆ. ದೇಶದ ಪ್ರತಿಯೊಬ್ಬ ಹೆಣ್ಣು ಮಕ್ಕಳಲ್ಲಿ ಓಬವ್ವ ಇದ್ದಾರೆ. ಅವರಂತೆ ನಾಯಕತ್ವ ಗುಣ ಬೆಳೆಸಿಕೊಂಡು ಹೆದರದೇ, ಎದೆಗುಂದದೆ ಮುನ್ನಡೆದಾಗ ಅವರ ಜಯಂತಿ ಆಚರಣೆಗೂ ಅರ್ಥ ಬರಲಿದೆ’ ಎಂದರು.
ಕಲಬುರ್ಗಿ ಬರಹಗಾರ ಡಾ. ವಿಠ್ಠಲ ವಗ್ಗನ್ ಮಾತನಾಡಿ, ಒನಕೆ ಓಬವ್ವ ಅವರ ಕುರಿತಾದ ಇತಿಹಾಸ ಹಾಗೂ ಇಂದಿನ ಸಮಾಜಕ್ಕೆ ಯಾವ ರೀತಿ ಪ್ರೇರಣೆಯಾಗಿದ್ದಾರೆ. ಹೆಣ್ಣು ಮಕ್ಕಳು ಅವರ ಆದರ್ಶವನ್ನು ಪಾಲಿಸಿಕೊಂಡು ಹೇಗೆ ಮುನ್ನಡೆಯಬೇಕು ಸೇರಿದಂತೆ ಇತರೆ ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ತಹಶೀಲ್ದಾರ್ ಗೀತಾ, ಆರ್‌ಪಿಐ ಸತೀಶ್, ಶಿವಮ್ಮ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
ಹೆಣ್ಣು ಮಕ್ಕಳು ಧೈರ್ಯದಿಂದ ಮುನ್ನಡೆಯಬೇಕು. ಯಾವುದಕ್ಕೂ ಅಂಜಬಾರದು. ಹತ್ತು ಜನರೊಂದಿಗೆ ಇರುವುದು ನಾಯಕತ್ವವಲ್ಲ. ಸ್ವಾವಲಂಬಿಯಾಗುವುದೇ ಶಕ್ತಿಯಾಗಿದೆಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.