ADVERTISEMENT

ಒಗ್ಗಟ್ಟಿನ ಹೋರಾಟದಿಂದ ದಲಿತರ ಸಮಸ್ಯೆಗಳಿಗೆ ಪರಿಹಾರ: ಕವಿ ಸಿದ್ದಲಿಂಗಯ್ಯ

ದಲಿತ ಸಮ್ಮೇಳನದ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 12:54 IST
Last Updated 11 ಜೂನ್ 2021, 12:54 IST
ಹಾಸನದಲ್ಲಿ ಏರ್ಪಡಿಸಿದ್ದ ಜಿಲ್ಲಾ ದಲಿತ ಸಮ್ಮೇಳನದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು.
ಹಾಸನದಲ್ಲಿ ಏರ್ಪಡಿಸಿದ್ದ ಜಿಲ್ಲಾ ದಲಿತ ಸಮ್ಮೇಳನದಲ್ಲಿ ಕವಿ ಸಿದ್ದಲಿಂಗಯ್ಯ ಮಾತನಾಡಿದರು.   

( 14 ಅಕ್ಟೋಬರ್ 2018ರಂದು ಪ್ರಕಟವಾಗಿದ್ದ ಲೇಖನವನ್ನು ಮರುಪ್ರಕಟಿಸಲಾಗಿದ)

ಹಾಸನ: ‘ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿದಾಗ ಮಾತ್ರ ದಲಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಕವಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಲಿತ ಸಂಘರ್ಷ ಸಮಿತಿ (ಭೀಮವಾದ) ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ 5ನೇ ದಲಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ದಲಿತ ಸಂಘಟನೆ ಮಾತ್ರ ಹೋರಾಟ ಮಾಡಿದರೆ ದಲಿತರ ಸಮಸ್ಯೆಗಳು ಇತರರಿಗೆ ತಿಳಿಯುವುದಿಲ್ಲ. ಹಾಗಾಗಿ ಇತರೆ ಸಮುದಾಯದ ಮುಖಂಡರನ್ನು ಸಹ ಒಗ್ಗೂಡಿಸಿಕೊಂಡರೆ ಪರಿಹಾರ ಲಭ್ಯವಾಗಲಿದೆ. ಹೋರಾಟ ಒಂದು ಜಾತಿಗೆ ಸೀಮಿತವಾದರೇ, ಜಾತಿ ಸಂಘರ್ಷದಲ್ಲಿ ಅಂತ್ಯವನ್ನು ಕಾಣಲಿದೆ’ ಎಂದು ಎಚ್ಚರಿಸಿದರು.

‘ದಲಿತ ಹೋರಾಟಗಾರರು ಅಂಬೇಡ್ಕರ್, ಪೆರಿಯಾರ್, ಕುವೆಂಪು, ಮಾರ್ಕ್ಸ್‌, ಲೋಹಿಯ ಅವರ ಕೃತಿಗಳನ್ನು ಓದಬೇಕು. ಹೋರಾಟದ ದಿಕ್ಕಿಗೆ ಶಕ್ತಿ ತುಂಬಲು ಸಹಕಾರಿಯಾಗುತ್ತದೆ. ಸಾಕಷ್ಟು ನೋವು, ಅಪಮಾನ ಅನುಭವಿಸಿರುವ ದಲಿತರು ಸೊಂಟಕ್ಕೆ ಪೊರಕೆ ಮತ್ತು ಮಡಿಕೆಯನ್ನು ಕಟ್ಟಿಕೊಂಡು ಓಡಾಡಬೇಕಾದಂತಹ ಪರಿಸ್ಥಿತಿ ಇತ್ತು’ ಎಂದು ನುಡಿದರು.

‘ಹಿಂದೆ ದಲಿತರಿಗೆ ಶಿಕ್ಷಣ ನೀಡುತ್ತಿರಲಿಲ್ಲ. ಆಗ ತಲಕಾಡಿನ ರಂಗೇಗೌಡರು ಮೊದಲ ಬಾರಿಗೆ ಶಿಕ್ಷಣ ಹೇಳಿಕೊಟ್ಟರು. ಹೀಗಾಗಿ ಅವರನ್ನು ವಿದ್ಯಾಗುರು ಅಂತ ಕರೆಯಲಾಗುತ್ತದೆ. 35 ವರ್ಷ ಮಕ್ಕಳಿಗೆ ಸ್ನಾನದಿಂದ ಹಿಡಿದು ಶಿಕ್ಷಣದವರೆಗೂ ಕಲಿಸಿಕೊಟ್ಟರು. ನಂತರ ಆರ್.ಗೋಪಾಲಸ್ವಾಮಿ ಐಯ್ಯರ್, ರಂಗರಾವ್ ಹಾಗೂ ಇತರರು ದುಡಿದರು’ ಎಂದರು.

‘ಗಾಂಧೀಜಿ ನಂತರ ವಿಶ್ವದಲ್ಲಿ ಶ್ರೇಷ್ಠ ವ್ಯಕ್ತಿ ಯಾರು ಎಂಬುದನ್ನು ತಿಳಿದುಕೊಳ್ಳಲು ಮತದಾನ ನಡೆಯಿತು. ಆಗ ಜವಹರ್ ಲಾಲ್ ನೆಹರುಗೆ 9 ಸಾವಿರ ಹಾಗೂ ಇಂದಿರಾ ಗಾಂಧಿಗೆ 19 ಸಾವಿರ ಮತಗಳು ಬಂದರೆ, ಅಂಬೇಡ್ಕರ್ ಗೆ 19 ಲಕ್ಷ ಮತಗಳು ಬಂದಿತ್ತು’ ಎಂದು ವಿವರಿಸಿದರು.

ಇದಕ್ಕೂ ಮುನ್ನ ಸಿದ್ದಲಿಂಗಯ್ಯ ದಂಪತಿಯನ್ನು ಸಮಾರಂಭ ನಡೆಯುವ ಸ್ಥಳಕ್ಕೆ ಎತ್ತಿನಗಾಡಿಯಲ್ಲಿ ಕರೆತರಲಾಯಿತು. `ಚಂದ್ರ ಪ್ರಸಾದ್ ತ್ಯಾಗಿ' ಪ್ರಶಸ್ತಿಯನ್ನು ಶಾಸಕ ಎಚ್.ಕೆ.ಕುಮಾರಸ್ವಾಮಿ ಪ್ರದಾನ ಮಾಡಿದರು.

ಸಮ್ಮೇಳನಾಧ್ಯಕ್ಷ ಎಚ್.ಕೆ.ಸಂದೇಶ್, ಕವಿ ಸುಬ್ಬು ಹೊಲೆಯಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವಾರಾಜ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಿಐಟಿಯು ಧರ್ಮೇಶ್‌, ಹೆತ್ತೂರ್ ನಾಗರಾಜ್ , ಪತ್ರಕರ್ತರಾದ ಎಚ್.ಪಿ.ಮದನ್ ಗೌಡ, ರವಿನಾಕಲಗೂಡು, ಬಿ.ಆರ್.ಉದಯ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.