
ಹಳೇಬೀಡು: ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜಿ.ಸಾಣೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಹಳೇಯ ಕಟ್ಟಡದ ಗೋಡೆ ಹಾಗೂ ಚಾವಣಿ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ.
ಕಟ್ಟಡದಲ್ಲಿ 30ಕ್ಕೂ ಹೆಚ್ಚು ವರ್ಷ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ನಡೆಸಲಾಗುತ್ತಿತ್ತು. ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿದ ನಂತರ ಕಟ್ಟಡವನ್ನು ಗ್ರಾಮದ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ಕಟ್ಟಡದಲ್ಲಿ ಸರ್ಕಾರಿ ಸಭೆಗಳನ್ನು ನಡೆಸಲಾಗುತ್ತಿತ್ತು. ಊರಿನ ಸಭೆ ಸಮಾರಂಭಗಳಿಗೂ ಕಟ್ಟಡ ಬಳಕೆಯಾಗುತ್ತಿತ್ತು. ಕಟ್ಟಡ ಕುಸಿದು ಬಿದ್ದಿರುವುದರಿಂದ ಗ್ರಾಮದ ಸಭೆ, ಸಮಾರಂಭಗಳಿಗೆ ತೊಡಕಾಗಿದೆ ಎಂದು ಗ್ರಾಮಸ್ಥ ಹೇಮಂತ್ ತಿಳಿಸಿದರು.
ಗ್ರಾಮಕ್ಕೆ ಹಾಲಿನ ಡೇರಿ ಮಂಜೂರಾದಾಗ ಸೂಕ್ತ ಕಟ್ಟಡದ ಕೊರತೆ ಆಯಿತು. ಗ್ರಾಮದವರೆಲ್ಲ ಒಗ್ಗೂಡಿ ಊರಿಗೆ ಮಂಜೂರಾದ ಡೇರಿಯನ್ನು ಉಳಿಸಿಕೊಳ್ಳೋಣ ಶಾಲೆಯ ಹಳೇಯ ಕಟ್ಟಡದಲ್ಲಿಯೇ ಡೇರಿ ನಡೆಸಲು ತೀರ್ಮಾನ ಕೈಗೊಂಡರು. ಡೇರಿ ಕಟ್ಟಡ ನಿರ್ಮಾಣ ಆಗುವವರೆಗೆ ಸುಮಾರು 25 ವರ್ಷ ಕಟ್ಟಡದಲ್ಲಿ ಡೇರಿ ನಡೆದಿದೆ. ಶಾಲೆಯ ಕಟ್ಟಡದಲ್ಲಿ ಆರಂಭವಾದ ಡೇರಿ ಜಿಲ್ಲೆಯ ಉತ್ತಮ ಡೇರಿಗಳಲ್ಲೊಂದಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ ತಿಳಿಸಿದರು.
ಈ ಕಟ್ಟಡದಲ್ಲಿ ಶಾಲೆ ಇದ್ದಾಗ ಕಲಿತವವರಲ್ಲಿ ಸಾಕಷ್ಟು ಮಂದಿ ಉನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರಿ ಉದ್ಯೋಗ ಹೊಂದಿದವರಲ್ಲಿ ಕೆಲವರು ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಶತಮಾನದ ಹಂಚಿನಲ್ಲಿರುವ ಪರಂಪರೆ ಕಟ್ಟಡವನ್ನು ದುರಸ್ತಿ ಮಾಡಿ ಉಳಿಸಿಕೊಳ್ಳಬೇಕಾಗಿದೆ ಎಂದು ರೈತ ಎಸ್.ಎನ್.ಯೋಗೀಶಪ್ಪ ಹೇಳಿದರು.
ಕಟ್ಟಡ ಒಂದಲ್ಲ ಒಂದು ಗ್ರಾಮದ ಕೆಲಸಕ್ಕೆ ಉಪಯೋಗವಾಗಿತ್ತು. ಕಟ್ಟಡದಲ್ಲಿ ನಡೆಸಿದ ಊರಿನ ಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಇತ್ಯರ್ಥ ಕಂಡು ಕೊಂಡಿದ್ದೇವು ಎಂದು ಗ್ರಾಮಸ್ಥರು ಹಳೇಯ ನೆನಪುಗಳನ್ನು ಬಿಚ್ಚಿಟ್ಟರು.
ಕಟ್ಟಡದ ಸ್ಥಿತಿಗತಿ ಕುರಿತು ಗ್ರಾಮ ಪಂಚಾಯಿತಿಯಲ್ಲಿ ಮಾತನಾಡಿದ್ದೇನೆ. ಕಟ್ಟಡ ದುರಸ್ತಿಗೆ ಪ್ರಕೃತಿ ವಿಕೋಪ ನಿಧಿಯಿಂದ ಹಣ ಮಂಜೂರು ಮಾಡಿಸಿಕೊಂಡುವಂತೆ, ಶಾಸಕರೊಂದಿಗೆ ಮಾತನಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.