ADVERTISEMENT

ವಕ್ಫ್ ತಿದ್ದುಪಡಿ ಮಸೂದೆಗೆ ವಿರೋಧ

ಅರಸೀಕೆರೆಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 13:58 IST
Last Updated 16 ಏಪ್ರಿಲ್ 2025, 13:58 IST
ಅರಸೀಕೆರೆ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು
ಅರಸೀಕೆರೆ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು   

ಅರಸೀಕೆರೆ: ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮುಸ್ಲಿಂ ಸಮುದಾಯದವರು ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಸಾವಿರಾರು ಮುಸ್ಲಿಮರು ನಗರದ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ತಹಶೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಅಬ್ದುಲ್ ಜಮೀಲ್ ಮಾತನಾಡಿ, ‘ವಕ್ಫ್ ತಿದ್ದುಪಡಿ ಮಸೂದೆ ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಅಲ್ಪಸಂಖ್ಯಾತರನ್ನು ಅವಮಾನಿಸುವುದು, ಅವರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ. ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಬಾರದು’ ಎಂದು ಒತ್ತಾಯಿಸಿದರು.

ADVERTISEMENT

ನಗರಸಭೆ ಅಧ್ಯಕ್ಷ ಎಂ.ಸಮಿವುಲ್ಲಾ ಮಾತನಾಡಿ, ‘ಮಸೂದೆಯನ್ನು ತಕ್ಷಣ ವಾಪಸ್ ಪಡೆಯದಿದ್ದರೆ ರಸ್ತೆಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ. ಚಂದ್ರಯ್ಯ‌, ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸೈಯದ್ ರಫೀಕ್, ಉಪಾಧ್ಯಕ್ಷ ನೂರ್ ಮೊಹಮ್ಮದ್, ಶರೀಫ್ ಸೈಯದ್, ನಜಿರುದ್ದೀನ್, ಕಾರ್ಯದರ್ಶಿ ರಿಯಾಜ್ ಪಾಶ, ನವಾಜ್ ಪಾಷಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.