ADVERTISEMENT

ವಿರೋಧಿಗಳ ಧ್ವನಿ ಅಡಗಿಸುವ ಯತ್ನ: ಆರೋಪ

ತೀಸ್ತಾ, ಶ್ರೀಕುಮಾರ್ ಬಿಡುಗಡೆ, ಉದಯಪುರ ಹತ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 2:14 IST
Last Updated 30 ಜೂನ್ 2022, 2:14 IST
ಸಿಪಿಎಂ, ದಲಿತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ನೇತೃತ್ವದಲ್ಲಿ ಹಾಸನದ ಜಿಲ್ಲಾಧಿಕಾರಿ ಕಚೇರಿ ಬಳಿಯ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಿಪಿಎಂ, ದಲಿತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ನೇತೃತ್ವದಲ್ಲಿ ಹಾಸನದ ಜಿಲ್ಲಾಧಿಕಾರಿ ಕಚೇರಿ ಬಳಿಯ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.   

ಹಾಸನ: ಗುಜರಾತ್ ನರಮೇಧದ ವಿರುದ್ಧ ಧ್ವನಿ ಎತ್ತಿದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್, ನಿವೃತ್ತ ಡಿಜಿಪಿ ಶ್ರೀಕುಮಾರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜ಼ುಬೈರ್ ಅವರ ಬಂಧನ ಖಂಡಿಸಿ, ಸಿಪಿಎಂ, ದಲಿತ ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಡಾ.ಅಂಬೇಡ್ಕರ್ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುಖಂಡ ಧರ್ಮೇಶ್, ‘ತೀಸ್ತಾ ಸೆಟಲ್‌ವಾಡ್ ಅವರ ಬಂಧನ ಇತರ ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಅಡಗಿಸುವ ಪ್ರಯತ್ನ, ಪೂರ್ವಯೋಜಿತ ಸಂಚಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿನ ಸಾಮಾಜಿಕ ಹೋರಾಟಗಾರರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ. ಸೆತಲವಾಡ್‌ ಅವರ ಬಂಧನವನ್ನು ಖಂಡಿಸುತ್ತೇವೆ’ ಎಂದರು.

ಆರ್‌ಎಸ್‌ಎಸ್‌, ಬಿಜೆಪಿಯ ಸುಳ್ಳುಗಳನ್ನು ಆಧಾರ ಸಹಿತವಾಗಿ ಬಯಲಿಗೆ ಎಳೆಯುತ್ತಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಖಂಡನೀಯ ಎಂದರು.

ADVERTISEMENT

ದೆಹಲಿಯಲ್ಲಿ ಎರಡು ವರ್ಷಗಳಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರು ನಡೆಸಿದ ಸರಣಿ ಹಿಂಸಾತ್ಮಕ ಮತ್ತು ಕೋಮು ದ್ವೇಷ ಚಟುವಟಿಕೆಗಳ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೇ ನಿಷ್ಕ್ರಿಯವಾಗಿರುವ ದೆಹಲಿಯ ಪೊಲೀಸರು, ಇದರ ವಿರುದ್ಧ ಧ್ವನಿ ಎತ್ತುವ ಸಾಮಾನ್ಯ ನಾಗರಿಕರು, ಪತ್ರಕರ್ತರು ಮತ್ತು ರಾಜಕೀಯ ನಾಯಕರ ದನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬುರಾರಿಯಲ್ಲಿ ನಡೆದ ಹಿಂದೂ ಮಹಾ ಪಂಚಾಯತ್ ಮತ್ತು ಬಿಜೆಪಿಯ ಹಿಂದಿನ ವಕ್ತಾರೆ ನೂಪುರ್‌ ಶರ್ಮಾ ಅವರ ಪ್ರವಾದಿ ಮಹಮ್ಮದ್ ವಿರುದ್ಧದ ಅವಹೇಳನಕಾರಿ ಸಂದೇಶ ಸೇರಿದಂತೆ ಇಂತಹ ಅನೇಕ ಘಟನೆಗಳನ್ನು ಬಹಿರಂಗಪಡಿಸಿದಕ್ಕೆ ಜುಬೈರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತದೆ. ಮೊಹಮ್ಮದ್ ಜುಬೈರ್‌ ಅವರನ್ನು ಬೇಷರತ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜಸ್ಥಾನದ ಉದಯಪುರ ನಗರದಲ್ಲಿ ಟೈಲರ್ ಕನ್ಹಯ್ಯಲಾಲ್ ಕತ್ತು ಸೀಳಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಅಪರಾಧಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್, ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ರಾಜ್‌ಶೇಖರ್, ಕೆ. ಈರಪ್ಪ, ಕಲಾವಿದ ಕೆ.ಟಿ. ಶಿವಪ್ರಸಾದ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಸೋಮಶೇಖರ್, ಸಂಚಾಲಕ ಕೃಷ್ಣದಾಸ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಶಿರ್ ಅಹಮದ್, ವೆಂಕಟೇಶ, ನಾಗರಾಜ್ ಹೆತ್ತೂರು, ಎಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.