ADVERTISEMENT

ಒತ್ತುವರಿ ತೆರವಿಗೆ 3 ದಿನ ಗಡುವು

ಬಿ.ಎಂ. ರಸ್ತೆ ಫುಟ್‌ಪಾತ್‌ ವ್ಯಾಪಾರಿಗಳಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 12:33 IST
Last Updated 23 ಜನವರಿ 2019, 12:33 IST
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ.
ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ.   

ಹಾಸನ: ಏಕಕಾಲಕ್ಕೆ ಒತ್ತುವರಿ ತೆರವು ಹಾಗೂ ಅಭಿವೃದ್ಧಿ ಕಾಮಗಾರಿಯಿಂದಾಗಿ ಬಿ.ಎಂ.ರಸ್ತೆ ಅಕ್ಕಪಕ್ಕದ ವ್ಯಾಪಾರಿಗಳು, ತೊಂದರೆಗೆ ಸಿಲುಕಿದ್ದಾರೆ. ಇದರ ನಡುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜ. 27ರ ಬಳಿಕ ಮತ್ತೆ ಪ್ರಾರಂಭಿಸಲು ನಗರಸಭೆ ನಿರ್ಧರಿಸಿದ್ದು, ಫುಟ್‌ಪಾತ್‌ ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಜ.11 ರಿಂದ ಮೂರು ದಿನ ಕಾರ್ಯಾಚರಣೆ ನಡೆಸಿ, ನಂತರ ಕಟ್ಟಡ ಮಾಲೀಕರೇ ತೆರವು ಮಾಡಿಕೊಳ್ಳಲಿ ಎಂದು ಅವಕಾಶ ನೀಡಲಾಗಿತ್ತು.

ಎನ್.ಆರ್.ವೃತ್ತದಿಂದ ಜಮುನಾ ಬಾರ್ ವರೆಗಿನ ಒಂದು ಬದಿಯ 41 ಕಟ್ಟಡಗಳನ್ನು ಭಾಗಶಃ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ವಿರೋಧಿಸಿ ಕೆಲ ಹೋಟೆಲ್, ಶಾಪಿಂಗ್ ಮಾಲ್ ಮಾಲೀಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು.
ಆದರೆ ಮೊದಲೇ ನಗರಸಭೆ ಕೇವಿಯಟ್ ಹಾಕಿದ್ದರಿಂದ ಹೈಕೋರ್ಟ್ ತಡೆ ನೀಡಿರಲಿಲ್ಲ. ಜ. 27 ರ ಒಳಗೆ ಮೈಸೂರು ಪ್ರಾದೇಶಿಕ ಆಯುಕ್ತರ ಮುಂದೆ ಪುನರ್ ಪರಿಶೀಲನಾ ಅರ್ಜಿ ಹಾಕಿಕೊಳ್ಳಬಹುದು ಎಂದು ಹೇಳಿತ್ತು.

ADVERTISEMENT

ಅದರಂತೆ ಕೆಲವರು ಸ್ವಯಂ ಪ್ರೇರಿತವಾಗಿ ತಮ್ಮ ಕಟ್ಟಡದ ಅಕ್ರಮ ಭಾಗವನ್ನು ಕೆಡಹುವ ಕೆಲಸದಲ್ಲಿ ತೊಡಗಿದ್ದರೆ, ಮತ್ತೆ ಕೆಲವರು ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ಕಾರ್ಯಾಚರಣೆ ಆರಂಭಿಸಿದ ದಿನದಿಂದಲೇ ಬಿಗ್ ಬಜಾರ್ ಸೇರಿದಂತೆ ಅನೇಕ ಕಟ್ಟಡಗಳಿಗೆ ವಿದ್ಯುತ್, ಒಳಚರಂಡಿ ಮತ್ತು ನೀರು ಪೂರೈಕೆ ಸಂಪರ್ಕ ಕಡಿತಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಟ್ರೇಡ್ ಲೈಸೆನ್ಸ್ ಸಹ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

‘ಪುನರ್‌ ಪರಿಶೀಲನಾ ಅರ್ಜಿ ಹಾಕದಿದ್ದರೆ ತೆರವು ಕಾರ್ಯಾಚರಣೆ ಸೇರಿದಂತೆ ಮುಂದಿನ ಕ್ರಮ ಅನುಸರಿಸಲಾಗುವುದು. ಹಾಲಿ ಬಿಗ್ ಬಜಾರ್ ನಲ್ಲಿ ಸಂಗ್ರಹವಾಗಿರುವ ಪದಾರ್ಥಗಳನ್ನು ಬೇರೆಡೆಗೆ ಸಾಗಿಸುತ್ತಿರಬಹುದು. ಅದಕ್ಕೆ ಅಡ್ಡಿ ಮಾಡಿದರೆ ದೊಡ್ಡ ಮಟ್ಟದ ಪರಿಹಾರ ಕೇಳಬಹುದು. ಗಡುವಿನವರೆಗೂ ಕಾದು ನೋಡಲಾಗುವುದು’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಬಿ.ಎಂ.ರಸ್ತೆಯ ಒಂದು ಬದಿಯ ವರ್ತಕರ ಸಮಸ್ಯೆ ಇದಾದರೆ, ಮತ್ತೊಂದು ಬದಿಯ ಕಟ್ಟಡಗಳಿಗೂ ತೆರವಿನ ಬಿಸಿ ತಟ್ಟಲಿದೆ. ಈಗಾಗಲೇ ರಸ್ತೆ ಮಧ್ಯೆ ಭಾಗದಿಂದ ಎಷ್ಟು ದೂರದವರೆಗೆ ಒತ್ತುವರಿಯಾಗಿದೆ ಎಂಬುದನ್ನು ಗುರುತು ಮಾಡಲಾಗಿದೆ. ಆದರೆ ಯಾರಿಗೂ ನೋಟಿಸ್ ನೀಡಿಲ್ಲ.

‘ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಆ ಕಡೆ ತೆರವು ಮಾಡಿದಂತೆ, ಈ ಭಾಗದಲ್ಲೂ ತೆರವು ಮಾಡುವುದು ನಿಶ್ಚಿತ. ಆದರೆ ನೋಟಿಸ್ ನೀಡುವುದರ ಜೊತೆಗೆ ನಾವೇ ತೆರವು ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು’ ಎಂದು ಕಟ್ಟಡಗಳ ಮಾಲೀಕರು ಮನವಿ ಮಾಡಿದ್ದಾರೆ.

ತಣ್ಣೀರುಹಳ್ಳದಿಂದ ಎನ್.ಆರ್.ವೃತ್ತದವರೆಗೆ ರಸ್ತೆ ಕಾಮಗಾರಿಗೆ ಮತ್ತೆ ಚಾಲನೆ ನೀಡಲಾಗಿದೆ. ರಸ್ತೆ ಅಗೆದ ಬಳಿಕ ವಾರವಾದರೂ ಮುಂದಿನ ಕೆಲಸ ಆರಂಭಿಸಿರಲಿಲ್ಲ. ರಸ್ತೆಯ ಭಯಾನಕ ಧೂಳಿನಿಂದ ಸಾರ್ವಜನಿಕರು ಹೈರಾಣಗಿದ್ದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ನೋಟಿಸ್‌ ಜಾರಿ ಮಾಡಿದ ಹಿನ್ನಲೆಯಲ್ಲಿ ಕೆಲಸ ಪ್ರಾರಂಭವಾಗಿದೆ.

ಸುಮಾರು 2 ಕಿ.ಮೀ. ಉದ್ದದ ರಸ್ತೆ ಧೂಳುಮಯವಾಗಿದ್ದು, ಪ್ರತಿಯೊಬ್ಬರು ಬಾಯಿ-ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.