ADVERTISEMENT

ಹಾಸನ | ಟೆಂಡರ್ ಪ್ರಕ್ರಿಯೆ ಪೂರ್ಣ: ಬಡವರಿಗೆ ಸ್ವಂತ ಮನೆ ಯೋಗ

ಒಂದು ಸಾವಿರ ಸೂರು ನಿರ್ಮಾಣಕ್ಕೆ ಸರ್ಕಾರ ಅನುಮತಿ, ಟೆಂಡರ್‌ ಪ್ರಕ್ರಿಯೆ ಪೂರ್ಣ

ಕೆ.ಎಸ್.ಸುನಿಲ್
Published 27 ಆಗಸ್ಟ್ 2020, 20:30 IST
Last Updated 27 ಆಗಸ್ಟ್ 2020, 20:30 IST
   

ಹಾಸನ: ಬಾಡಿಗೆ ಮನೆ, ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಸ್ವಂತ ಮನೆ ಹೊಂದುವ ಯೋಗ ಬಂದಿದೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ ₹63.39 ಕೋಟಿ ವೆಚ್ಚದಲ್ಲಿ ಒಂದು ಸಾವಿರ ಮನೆಗಳ ನಿರ್ಮಾಣ ಕಾಮಗಾರಿಗೆ ಸರ್ಕಾರದ ಒಪ್ಪಿಗೆ ದೊರೆತಿದ್ದು, ಕೊಳಚೆ ನಿರ್ಮೂಲನಾ ಮಂಡಳಿ ಟೆಂಡರ್‌ ಕಾರ್ಯ ಪೂರ್ಣಗೊಳಿಸಿದೆ.

20*20 ಅಳತೆಯ ಪ್ರತಿ ಮನೆಗೆ ₹ 6.38 ಲಕ್ಷ ವೆಚ್ಚ ನಿಗದಿಪಡಿಸಿದ್ದು, ₹2.40 ಲಕ್ಷ ಸಹಾಯಧನ ಫಲಾನುಭವಿಗಳಿಗೆ ದೊರೆಯಲಿದೆ.

ADVERTISEMENT

ನಗರದ ಬೀರನಹಳ್ಳಿಯಲ್ಲಿ 106, ಪೆನ್‌ಷನ್‌ ಮೊಹಲ್ಲಾ 144, ಚಿಕ್ಕನಾಳು 100, ಎಂ.ಹೊಸಕೊಪ್ಪಲು 50, ಕೆ.ಹೊಸಕೊಪ್ಪಲು 50, ಆಡುವಳ್ಳಿ 50, ಹುಣಸಿನಕೆರೆ 50, ಚಿಪ್ಪಿನನಕಟ್ಟೆ 100, ಹರಿಜನ ಮೋರ್ಚಾ ಕಾಲೊನಿ 50, ಬಿ.ಎಂ.ರಸ್ತೆ ಅಂಬೇಡ್ಕರ್‌ ನಗರ 150, ಕೆಇಬಿ ಕಾಲೊನಿ 100, ಕುಂಬಾರಗೇರಿ 50 ಸೇರಿದಂತೆ ಸಾವಿರ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ನಗರಸಭೆ ಪೌರಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್‌ ನೌಕರರು ಸೇರಿದಂತೆ ಇತರೆ ಶ್ರಮಿಕ ವರ್ಗಗಳು ದಶಕಗಳಿಂದ ಸ್ವಂತ ಸೂರಿಲ್ಲದೆ ಪರದಾಡುತ್ತಿದ್ದರು. ಹದಗೆಟ್ಟ ರಸ್ತೆ, ಕಿಷ್ಕಿಂಧೆ ವಾತಾವರಣ, ಒಳಚರಂಡಿ ಸೌಲಭ್ಯ ಇಲ್ಲದೇ ಶ್ರೀನಗರ ಹಾಗೂ ಸುತ್ತಮುತ್ತಲ ಭಾಗದಲ್ಲಿ ಜನರು ವಾಸಿಸುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು ಸ್ವಂತ ಸೂರು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿ ಹೋಗುತ್ತಿದ್ದರು.

ನಗರದಲ್ಲಿ 17 ಸ್ಲಂ ಗಳಿದ್ದು, ಅಂದಾಜಿನ ಪ್ರಕಾರ ಎರಡು ಸಾವಿರಕ್ಕೂ ಅಧಿಕ ಕುಟುಂಬಗಳು ಸ್ವಂತ ಮನೆಯಿಲ್ಲದೆ ಜೀವನ ನಡೆಸುತ್ತಿವೆ. ಮಂಜೂರಾಗಿರುವ ಸಾವಿರ ಮನೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 500, ಹಿಂದುಳಿದ ವರ್ಗಕ್ಕೆ 100, ಅಲ್ಪಸಂಖ್ಯಾತ ಸಮುದಾಯಕ್ಕೆ 100, ಇತರರಿಗೆ 300 ಮನೆಗಳನ್ನು ಮೀಸಲಿಡಲಾಗಿದೆ.

ಜಿಲ್ಲಾಧಿಕಾರಿ ಆರ್‌.ಗಿರೀಶ್‌, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಶ್ರೀನಗರ ಬಡಾವಣೆಗೆ ಭೇಟಿ ನೀಡಿ ಮನೆ ನಿರ್ಮಿಸುವ ಸ್ಥಳ ಪರಿಶೀಲಿಸಿದ್ದಾರೆ. ಅಧಿಕಾರಿಗಳು ಸರ್ವೆ ಕಾರ್ಯ ಪ್ರಾರಂಭಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ವರ್ಷದೊಳಗೆ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.