ADVERTISEMENT

ಪಾಂಡವಪುರ | ಸಂಚಾರಕ್ಕೆ ಅಡಚಣೆ; ಸಾರ್ವಜನಿಕರ ಆಕ್ರೋಶ

ಕುಂಟುತ್ತಾ ಸಾಗಿರುವ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:21 IST
Last Updated 19 ನವೆಂಬರ್ 2025, 4:21 IST
ಪಾಂಡವಪುರ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿ 
ಪಾಂಡವಪುರ ಪಟ್ಟಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ದಿ ಕಾಮಗಾರಿ    

ಪಾಂಡವಪುರ: ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಗ್ರಾಮದಿಂದ ಪಾಂಡವಪುರ ತಾಲ್ಲೂಕಿನ ಬನಘಟ್ಟದವರೆಗಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ವರ್ಷ ಕಳೆದರೂ ಕುಂಟುತ್ತಾ ಸಾಗಿದ್ದು, ಸಂಚಾರಕ್ಕೆ ತೊಂದರೆಯಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯು ಪಾಂಡವಪುರ ಪಟ್ಟಣದ ಮೂಲಕ ಹಾದುಹೋಗಿದ್ದು, ಮಂದಗತಿಯಲ್ಲಿ ಸಾಗಿರುವ ರಸ್ತೆ ಕಾಮಗಾರಿಯಿಂದ ಪಟ್ಟಣದಲ್ಲಿ ವಾಹನ ಸಂಚಾರರು ಮತ್ತು ಪಟ್ಟಣದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ.

2024ರ ಜುಲೈ–ಆಗಸ್ಟ್‌ ತಿಂಗಳಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ರಸ್ತೆ ನಿರ್ಮಾಣ ಕಾಮಗಾರಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಭೂಮಿ ಪೂಜೆ ಮಾಡಿದ್ದರು. ಈ ರಸ್ತೆ ಕಾಮಗಾರಿಯನ್ನು ಎಸ್‌ಟಿಜಿ ಇನ್ಪ್ರಾಸಿಸ್ ಪ್ರೈ.ಲಿ. ಗುತ್ತಿಗೆ ಪಡೆದಿದ್ದು, ಕಾಮಗಾರಿ ಎಲ್ಲಿಂದ ಎಲ್ಲಿಯವರೆಗೆ ನಡೆಯುತ್ತಿದೆ. ಕಾಮಗಾರಿಯ ಒಟ್ಟು ಮೊತ್ತವೆಷ್ಟು, ಯಾವ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ರಸ್ತೆ ವಿಸ್ತರಣೆ ಯಾವ ರೀತಿ ಮಾಡಲಾಗುತ್ತಿದೆ ಎಂಬುದರ ಬಗೆಗಿನ ಮಾಹಿತಿಯೇ ಸಾರ್ವಜನಿಕರಿಗೆ ಲಭ್ಯವಿಲ್ಲ. ಕಾಮಗಾರಿಯ ಸಂಪೂರ್ಣ ಮಾಹಿತಿಯುಳ್ಳ ನಾಮಫಲಕಗಳನ್ನು ಎಲ್ಲಿಯೂ ಹಾಕಿರುವುದಿಲ್ಲ ಎಂದು ಸಾರ್ವಜನಿಕರಾದ ಉಮಾಶಂಕರ್, ದಿವಾಕರ್, ಬಲರಾಮೇಗೌಡ, ಎಚ್.ಪಿ.ಸೋಮಶೇಖರ್ ಆರೋಪಿಸಿದ್ದಾರೆ.

ADVERTISEMENT

ಕಾಮಗಾರಿ ನಿರ್ಮಾಣ ವೇಳೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸಲಾಗುತ್ತಿಲ್ಲ. ಕನಿಷ್ಠ ಬ್ಯಾರಿಕೇಡ್‌ಗಳನ್ನು ಬಳಸದೆ ಕಾಮಗಾರಿ ನಡೆಸುತ್ತಿದ್ದು, ವಾಹನ ಸವಾರರು, ಸಾರ್ವಜನಿಕರಿಗ ತುಂಬ ತೊಂದರೆಯಾಗಿದೆ. ಕಾಮಗಾರಿ ನಿರ್ವಹಣೆ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯಾವೊಬ್ಬ ಎಂಜಿನಿಯರ್ ಮತ್ತು ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಹಾಜರಿರದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆಯ ಅರ್ಧ ಭಾಗದಷ್ಟು ಕಾಮಗಾರಿಯ ಕಚ್ಚಾ ವಸ್ತುಗಳನ್ನು ಹಾಕಿಕೊಂಡಿರುವುದರಿಂದ ಇಡೀ ರಸ್ತೆ ದೂಳುಮಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜನರಿಗೆ ರಸ್ತೆ ಕಾಮಗಾರಿ ಮಾಹಿತಿ ಇಲ್ಲ. ಕಾಮಗಾರಿ ವೀಕ್ಷಣೆ ಮಾಡಬೇಕಾದ ಎಂಜಿನಿಯರ್‌ಗಳು ಪತ್ತೆ ಇಲ್ಲ ಎನ್ನುತ್ತಾರೆ ಎಚ್.ಎನ್.ಮಂಜುನಾಥ್.

ಅವಧಿ ಮುಗಿದರೂ ಮುಗಿಯದ ಕಾಮಗಾರಿ 

ಈ ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ರಸ್ತೆ ಅಭಿವೃದ್ಧಿಗೆ ₹ 46 ಕೋಟಿ ವೆಚ್ಚದ ಕಾಮಗಾರಿಯ ಟೆಂಡರ್ ಮೊತ್ತ ₹42.40ಕೋಟಿ. ಆದರೆ ಗುತ್ತಿಗೆ ಒಪ್ಪಿಗೆ ಮೊತ್ತ ₹30.53ಕೋಟಿಗಳಾಗಿದ್ದು 11 ತಿಂಗಳ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಕಳೆದ 2024ರ ಅಕ್ಟೋಬರ್ 18ರಂದು ಕಾಮಗಾರಿಗೆ ಅನುಮತಿ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ರೂಪಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.