
ಹಳೇಬೀಡು: ‘ಪೋಷಕರು ಶಿಕ್ಷಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಬಡ ಮಕ್ಕಳ ಆಶಾಕಿರಣವಾಗಿರುವ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕು. ಪೋಷಕರು ತಮ್ಮ ಮಕ್ಕಳು ಕಲಿಯುವ ಶಾಲಾ, ಕಾಲೇಜಿನೊಂದಿಗೆ ಸಂಪರ್ಕದಲ್ಲಿದ್ದ ಮಕ್ಕಳ ಶ್ರೇಯೋಭಿವೃದ್ದಿಯತ್ತ ಗಮನಹರಿಸಬೇಕು. ಮಕ್ಕಳ ಚಲನವಲನ ಗಮನಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು’ ಎಂದು ಪ್ರಾಂಶುಪಾಲರಾದ ವಿನುತಾ ಬಿ.ಎಸ್. ಹೇಳಿದರು.
ಹಳೇಬೀಡಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ಪೋಷಕ-ಶಿಕ್ಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಮಾತನಾಡಿ, ‘ಬಾಲ್ಯದಲ್ಲಿ ಕಲಿತ ವಿಚಾರಗಳು ಜೀವನ ಪೂರ್ತಿ ಉಳಿಯುತ್ತವೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಕಲಿಕೆಗೆ ಪ್ರೋತ್ಸಾಹ ನೀಡಬೇಕು’ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಜೆ.ನಾರಾಯಣ ಮಾತನಾಡಿ, ‘ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು. ಹರಿದು ಬರುತ್ತಿದೆ. ದೊಡ್ಡ ಶಾಲೆಗಳ ಜೊತೆ ಹತ್ತಿರದ ಚಿಕ್ಕ ಶಾಲೆಗಳನ್ನು ವಿಲೀನ ಮಾಡಿ ಅಯಸ್ಕಾಂತಿಯ ಆಕರ್ಷಣೆ ಎಂಬ ಪರಿಕಲ್ಪನೆ ಅಡಿಯಲ್ಲಿ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದರು.
ಶಾಲಾಭಿವೃದ್ಧಿ ಸದಸ್ಯ ಎಚ್.ಪರಮೇಶ್, ಉಪ ಪ್ರಾಂಶುಪಾಲ ಮೋಹನ ರಾಜು, ಉಪನ್ಯಾಸಕರಾದ ಬಸವರಾಜು, ರಾಘವೇಂದ್ರ, ಮುಖ್ಯ ಶಿಕ್ಷಕಿ ಜಿ.ಪಿ.ಕಲಾವತಿ, ಶಿಕ್ಷಕರಾದ ಶಶಿಧರ, ಎಚ್.ಆರ್.ನಾಗರಾಜು, ಮಮತಾ ಪ್ರಭು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಕ್ಯಣ್ಣ ಕುಮಾರ್ ಮಾತನಾಡಿದರು.
ಕಿರಿಯ ಮಹಿಳಾ ಆರೋಗ್ಯ ಸುರಕ್ಷಣಾಧಿಕಾರಿ ಲತಾ ಎಂ.ಬಿ, ಆಶಾ ಕಾರ್ಯಕರ್ತೆ ಎಚ್.ಆರ್.ಪುಷ್ಪ
ಯೋಗ ಶಿಕ್ಷಕ ಚೇತನ್ ಗುರೂಜಿ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.