ADVERTISEMENT

ಜನರಲ್ಲಿ ಕೋಮುಭಾವನೆ ಕೆರಳಿಸುತ್ತಿಲ್ಲ: ಸಂತೋಷ್ ಕೆಂಚಾಂಬ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಅಧಿನಿಯಮ 2002ರ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 4:52 IST
Last Updated 1 ಏಪ್ರಿಲ್ 2022, 4:52 IST
ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ರಾಷ್ಟಧರ್ಮ, ಬಜರಂಗದಳ, ವಿಶ್ವಹಿಂದೂ ಪರಿಷತ್, ಶ್ರೀರಾಮ ಸೇನೆ ಮುಖಂಡರು ಹಿಂದೂಪರ ಘೋಷಣೆ ಕೂಗಿದರು (ಎಡಚಿತ್ರ). ಹಾಸನ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ರಕ್ಷಿತ್, ಅನಿಲ್ ಕುಮಾರ್, ರಾಮಣ್ಣ ಮನವಿ ಸಲ್ಲಿಸಿದರು
ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ರಾಷ್ಟಧರ್ಮ, ಬಜರಂಗದಳ, ವಿಶ್ವಹಿಂದೂ ಪರಿಷತ್, ಶ್ರೀರಾಮ ಸೇನೆ ಮುಖಂಡರು ಹಿಂದೂಪರ ಘೋಷಣೆ ಕೂಗಿದರು (ಎಡಚಿತ್ರ). ಹಾಸನ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ರಕ್ಷಿತ್, ಅನಿಲ್ ಕುಮಾರ್, ರಾಮಣ್ಣ ಮನವಿ ಸಲ್ಲಿಸಿದರು   

ಬೇಲೂರು: ‘ಜಾತ್ರಾ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ನಾನು ವೈಯಕ್ತಿಕವಾಗಿ ಹೇಳುತ್ತಿಲ್ಲ. ಈಗಾಗಲೇ ಇರುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತನ್ನಿ ಎಂದಷ್ಟೇ ಹೇಳುತ್ತಿದ್ದೇನೆ ಹೊರತು ಕೋಮು ಭಾವನೆ ಕೆರಳಿಸುತ್ತಿಲ್ಲ’ ಎಂದು ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ ಸ್ಪಷ್ಟಪಡಿಸಿದರು.

ಇಲ್ಲಿನ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ಗುರುವಾರ ಹಿಂದೂಪರ ಘೋಷಣೆಗಳನ್ನು ಕೂಗಿದ ಅವರು, ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಅಧಿನಿಯಮ 2002 ಅನ್ನು ಸರಿಯಾಗಿ ಜಾರಿಗೊಳಿಸುವಂತೆ ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇನೆ’ ಎಂದರು.

‘ನಾನು ರಾಜಕೀಯ ಮಾಡಲು ಹೋರಾಟ ನಡೆಸುತ್ತಿಲ್ಲ. ಹಿಂದೂ ಧರ್ಮದ ಪರವಾಗಿ, ಸನಾತನ ಧರ್ಮದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಬಜರಂಗದಳದ ತಾಲ್ಲೂಕು ಘಟಕದ ಸಹ ಸಂಚಾಲಕ ಆದೇಶ ಮಾತನಾಡಿ, ‘ಹಿಜಾಬ್ ಬಗ್ಗೆ ತೀರ್ಪು ಬಂದಾಗ ಬಂದ್ ಮಾಡಿ ನ್ಯಾಯಾಂಗ ವ್ಯವಸ್ಥೆಗೆ ಅವಮಾನ ಮಾಡಿದವರಿಗೆ ಯಾರು ಬುದ್ಧಿ ಹೇಳಲಿಲ್ಲ. ಆದರೆ, ಈಗ ಸಾಕಷ್ಟು ಜನ ಸಂವಿಧಾನದ ಪಾಠ ಮಾಡುತ್ತಿದ್ದಾರೆ. ಇಂತಹವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿಶ್ವ ಹಿಂದೂ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಬಜರಂಗದಳದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡ, ಪ್ರಜ್ವಲ್, ದರ್ಶನ್, ದಿಲೀಪ್, ವಿಜಯ್, ಮೋಹನ್, ಸುಪ್ರೀತ್, ರಾಘು, ಲೋಕೇಶ್, ಚಂದನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.