ADVERTISEMENT

ಹೆತ್ತೂರು | ಕಾಳುಮೆಣಸು,ಕಾಫಿ ಹಾನಿ: ಪರಿಹಾರಕ್ಕೆ ಕ್ರಮದ ಭರವಸೆ

ಯಸಳೂರು ಹೋಬಳಿ ಬೆಳೆಗಾರರ ಸಂಘದ ಸಭೆಯಲ್ಲಿ ಗಂಗಾಧರ್‌

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 5:21 IST
Last Updated 10 ಸೆಪ್ಟೆಂಬರ್ 2025, 5:21 IST
ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು
ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಳೆಗಾರರು   

ಹೆತ್ತೂರು: ಈ ಭಾಗದಲ್ಲಿ ಹೆಚ್ಚು ಮಳೆ ಹಾಗೂ ವಾತಾವರಣದ ಬದಲಾವಣೆಯಿಂದಾಗಿ ಕಾಳುಮೆಣಸು ಉದುರುತ್ತಿದ್ದು, ಬೆಳೆಗಾರರನ್ನು ಆತಂಕಕ್ಕೆ ದೂಡಿದೆ ಎಂದು ಸಂಘದ ಅಧ್ಯಕ್ಷ ಕೆ.ಬಿ. ಗಂಗಾಧರ್ ಹೇಳಿದರು.

ಹೊಸೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಯಸಳೂರು ಹೋಬಳಿ ಬೆಳೆಗಾರರ ಸಂಘದ ಏಳನೆಯ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬೆಳೆಗಾರರ ಸಂಘದಿಂದ ಕಾಳುಮೆಣಸು ತಜ್ಞರನ್ನು ಕರೆಸಿ, ಉದುರುವ ರೋಗಕ್ಕೆ ಸೂಕ್ತ ಔಷಧಿಗಳ ಸಲಹೆ ಮತ್ತು ಪೂರೈಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ಅವರನ್ನು ಕರೆಸಿ, ಸಮಸ್ಯೆಯನ್ನು ವಿವರಿಸುವ ಮೂಲಕ ಸರ್ಕಾರದಿಂದ ಪರಿಹಾರ ಕಲ್ಪಿಸಿಕೊಡುವಂತೆ ಮನವಿ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸೆ. 29ರಂದು ಆಚರಿಸುತ್ತಿರುವ ರಾಷ್ಟ್ರೀಯ ಕಾಫಿ ದಿನಕ್ಕೆ ಹೆಚ್ಚಿನ ಸಂಖ್ಯೆಯ ಕಾಫಿ ಬೆಳೆಗಾರರು ಒಟ್ಟಿಗೆ ಸೇರಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು ಎಂದ ಅವರು, ಸಂಘದ ಬಲವರ್ಧನೆ ದೃಷ್ಟಿಯಿಂದ ಪ್ರತಿ ಗ್ರಾಮದ ಬೆಳೆಗಾರರು ಸಂಘದ ಸದಸ್ಯತ್ವ ಹೊಂದಿ, ಸಂಘದ ಜೊತೆಗೆ ನಿಕಟ ಸಂಪರ್ಕ ಬೆಳೆಸಿಕೊಳ್ಳಬೇಕು. ಇದರಿಂದ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಕೆಜಿಎಫ್ ಉಪಾಧ್ಯಕ್ಷ ಬಿ.ಎಂ. ನಾಗರಾಜ್, ಸರ್ಫೇಸಿ ಕಾಯ್ದೆಯಿಂದ ರೈತರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಸರ್ಕಾರ ಇತ್ತೀಚಿನ ದಿನಗಳಲ್ಲಿ ಸರ್ಫೇಸಿ ಕಾಯ್ದೆಯಲ್ಲಿ ಬದಲಾವಣೆ ಮಾಡಿಕೊಡುವ ನಿಟ್ಟಿನಲ್ಲಿ ಬೆಳೆಗಾರರ ಸಂಘದ ಹೋರಾಟದ ಬಗ್ಗೆ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿ ನಿತಿನ್, ಮಣ್ಣಿನ ಪಿಎಚ್ ಮೌಲ್ಯ ಮತ್ತು ಎನ್‌ಪಿಕೆ ಮೌಲ್ಯದ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಿದರು. ಹೊಸೂರು ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಅನಂತ್ ಕುಮಾರ್, ಕಾರ್ಯದರ್ಶಿಯಾಗಿ ಸುನಿಲ್ ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ಮಾಜಿ ಅಧ್ಯಕ್ಷ ಹೊಸೂರು ವಿಠಲ್, ರಾಮೇಗೌಡ, ಪುಟ್ಟೇಗೌಡ, ಎಚ್.ಪಿ. ರವಿಕುಮಾರ್, ಎಚ್.ಆರ್. ಮೋಹನ್, ಎಚ್.ಕೆ. ದಿನೇಶ್, ಎಚ್.ಕೆ. ರಮೇಶ್, ರಾಜಶೇಖರ್, ಸಿ.ಕೆ. ಸುಬ್ಬೇಗೌಡ, ದಮಯಂತಿ, ಮಂಜುಳಾ ಹಾಗೂ ಕಾವೇರಮ್ಮ ಸೇರಿದಂತೆ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಉಪಸ್ಥಿತರಿದ್ದರು.

ಉದುರುತ್ತಿರುವ ಕಾಳುಮೆಣಸು; ಆತಂಕದಲ್ಲಿ ಬೆಳೆಗಾರ  29ರಂದು ರಾಷ್ಟ್ರೀಯ ಕಾಫಿ ದಿನ ಆಚರಣೆ ಬೆಳೆಗಾರರಿಗೆ ಮಣ್ಣಿನ ಪಿಎಚ್, ಎನ್‌ಪಿಕೆ ಮೌಲ್ಯದ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.