ADVERTISEMENT

ಹಾಸನ: ಜೆಡಿಎಸ್‌ ಸಭೆಗೆ ಬಿಜೆಪಿ ಮುಖಂಡರ ಗೈರು

ಫ್ಲೆಕ್ಸ್‌ಗಳಲ್ಲಿ ಮೈತ್ರಿ ಪಕ್ಷಗಳ ನಾಯಕರ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 14:21 IST
Last Updated 26 ಮಾರ್ಚ್ 2024, 14:21 IST
ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಸಭೆಯಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರ ಭಾವಚಿತ್ರಗಳು ಗಮನ ಸೆಳೆದವು.
ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಸಭೆಯಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರ ಭಾವಚಿತ್ರಗಳು ಗಮನ ಸೆಳೆದವು.   

ಹಾಸನ: ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಜೆಡಿಎಸ್‌ನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾರ್ಯಕರ್ತರ ಸಭೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳನ್ನೂ ಮುದ್ರಿಸಲಾಗಿತ್ತು. ಆದರೆ, ಸಭೆಯಲ್ಲಿ ಬಿಜೆಪಿಯ ಯಾವ ನಾಯಕರೂ ಪಾಲ್ಗೊಂಡಿರಲಿಲ್ಲ.

ಒಂದು ಬದಿಯಲ್ಲಿ ವರಿಷ್ಠ ಎಚ್‌.ಡಿ.ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಭಾವಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌. ಯಡಿಯೂರಪ್ಪ ಅವರ ಚಿತ್ರಗಳಿದ್ದವು. ಕೆಳಭಾಗದಲ್ಲಿ ಜೆಡಿಎಸ್ ನಾಯಕರ ಜೊತೆಗೆ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಬೆಳ್ಳಿಪ್ರಕಾಶ್, ಎ.ಟಿ.ರಾಮಸ್ವಾಮಿ, ಎಚ್.ಎಂ.ವಿಶ್ವನಾಥ್, ಬಿ.ಆರ್.ಗುರುದೇವ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರ ಫೋಟೋಗಳಿದ್ದವು.

ಪ್ರಜ್ವಲ್‌ ರೇವಣ್ಣ‌ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪ್ರೀತಂಗೌಡ ಬಣದ ವಿರೋಧ ತಣ್ಣಗಾಗಿಸಲು ಮೊದಲ ಬಾರಿಗೆ ಬಿಜೆಪಿ ನಾಯಕರ ಫೋಟೋ ಹಾಕಿರುವ ಜೆಡಿಎಸ್ ನಡೆಯು ಅಚ್ಚರಿ ಮೂಡಿಸಿದೆ.

ADVERTISEMENT

ಜೆಡಿಎಸ್‌ ಸ್ಪರ್ಧೆಗೆ ಬಿಜೆಪಿಯಿಂದ ಹೆಚ್ಚುತ್ತಿರುವ ಪ್ರತಿರೋಧದ ಬೆನ್ನಲ್ಲೇ, ಎಚ್‌.ಡಿ. ರೇವಣ್ಣ ಹಾಗೂ ಪ್ರಜ್ವಲ್‌ ಅವರು, ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು.

ನಂತರ, ಹಳೇ ಮೈಸೂರು ಕ್ಲಸ್ಟರ್‌ ಬಿಜೆಪಿ ಉಸ್ತುವಾರಿ ಎಸ್‌.ಎ. ರಾಮದಾಸ್‌ ನಗರಕ್ಕೆ ಭೇಟಿ ನೀಡಿ, ಜೆಡಿಎಸ್‌ಗೆ ಬಿಜೆಪಿ ನಾಯಕರು ಬೆಂಬಲ ನೀಡಲೇಬೇಕು ಎಂದು ತಾಕೀತು ಮಾಡಿದ್ದರು. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರವಾಲ್‌ ಕೂಡ ನಗರಕ್ಕೆ ಮಂಗಳವಾರ ಬಂದಿದ್ದು, ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.