ADVERTISEMENT

ಜಾವಗಲ್ | ಶವಾಗಾರದಲ್ಲಿ ಮೂಲಸೌಲಭ್ಯದ ಕೊರತೆ ; ದನದ ದೊಡ್ಡಿಯಲ್ಲೇ ಶವ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 2:20 IST
Last Updated 23 ಜುಲೈ 2020, 2:20 IST
ಜಾವಗಲ್‌ನ ತಿಮ್ಮನಹಳ್ಳಿ ರಸ್ತೆಯಲ್ಲಿರುವ ಶವಾಗಾರ ಕಟ್ಟಡವು ಗಿಡಗಂಟಿಗಳಿಂದ ಮುಚ್ಚಿಹೋಗಿದೆ
ಜಾವಗಲ್‌ನ ತಿಮ್ಮನಹಳ್ಳಿ ರಸ್ತೆಯಲ್ಲಿರುವ ಶವಾಗಾರ ಕಟ್ಟಡವು ಗಿಡಗಂಟಿಗಳಿಂದ ಮುಚ್ಚಿಹೋಗಿದೆ   

ಜಾವಗಲ್ (ಅರಸೀಕೆರೆ ತಾಲ್ಲೂಕು)‌: ಪಟ್ಟಣದ ಹೊರವಲಯದ ತಿಮ್ಮನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಶವಾಗಾರವು ಮೂಲಸೌಲಭ್ಯಗಳಿಲ್ಲದೆ ಪಾಳು ಬಿದ್ದಿದೆ. ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದಾಗಿ ಆಸ್ಪತ್ರೆಯ ಆವರಣದಲ್ಲಿರುವ ದನದ ದೊಡ್ಡಿಯಲ್ಲೇ ಶವ ಪರೀಕ್ಷೆ ನಡೆಯುತ್ತಿದೆ.

ಜಾವಗಲ್‌ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 80 ಹಳ್ಳಿಗಳಿವೆ. ಅಕ್ಕಪಕ್ಕದ ಹೋಬಳಿಗೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವೇ ದೊಡ್ಡ ಆಸ್ಪತ್ರೆಯಾಗಿದೆ. ತಿಮ್ಮನಹಳ್ಳಿ ರಸ್ತೆ ಪಕ್ಕದಲ್ಲಿರುವ ಶವಾಗಾರದಲ್ಲೇ ಹಿಂದೆ ಶವಪರೀಕ್ಷೆಯನ್ನು ಮಾಡಲಾಗುತ್ತಿತ್ತು. ಎರಡು ದಶಕಗಳಿಂದ ವ್ಯವಸ್ಥೆಯೇ ಇಲ್ಲದೆ ಪಾಳುಬಿದ್ದಿದೆ. ದನದ ದೊಡ್ಡಿಯಲ್ಲಿ ಪರದೆ ಹಾಕಿಕೊಂಡು ಶವ ಪರೀಕ್ಷೆ ಮಾಡುವ ಸ್ಥಿತಿ ಉಂಟಾಗಿದೆ.

ಆಸ್ಪತ್ರೆಯ ಆವರಣದಲ್ಲಿ ಜಾಗ ಇರುವುದರಿಂದ ಶವಾಗಾರ ಕೊಠಡಿ ನಿರ್ಮಿಸಬೇಕು. ಅಪಘಾತ, ಅನಾರೋಗ್ಯದಿಂದ ಮೃತಪಟ್ಟವರ ಶವಪರೀಕ್ಷೆ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಹೊಸ ಕಟ್ಟಡ ನಿರ್ಮಿಸಿಲ್ಲ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಈ ಬಗ್ಗೆ ಪ್ರಜಾವಾಣಿ ಆಸ್ಪತ್ರೆ ಸಿಬ್ಬಂದಿಯನ್ನು ಮಾತನಾಡಿಸಿದಾಗ ‘ಹಣವಂತರು ಅರಸೀಕೆರೆ, ಹಾಸನದಲ್ಲಿ ಶವಪರೀಕ್ಷೆ ಮಾಡಿಸುತ್ತಾರೆ. ಅರಸೀಕೆರೆ, ಹಾಸನಕ್ಕೆ ಹೋಗಿ ಶವವನ್ನು ಊರಿಗೆ ತರುವ ಹೊತ್ತಿಗೆ ₹ 15ಸಾವಿರ ಖರ್ಚಾಗುತ್ತದೆ.
ಈ ಕಾರಣದಿಂದ ಬಡವರು ದನದ ದೊಡ್ಡಿಯಲ್ಲಿ ಶವ ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಾರೆ’ ಎನ್ನುತ್ತಾರೆ.

ಈ.ಎಚ್‌.ಲಕ್ಷ್ಮಣ್‌ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾಗ ₹ 2ಲಕ್ಷ ವೆಚ್ಚದಲ್ಲಿ ಶವಾಗಾರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಕಾಮಗಾರಿಗೆ ಭೂಮಿ ಪೂಜೆಯೂ ನಡೆದಿತ್ತು. ಆದರೆ ನಂತರ ಕೆಲಸ ನಡೆಯಲಿಲ್ಲ ಎಂದು ಹೋಬಳಿ ಜೆಡಿಎಸ್‌ ಘಟಕದ ಅಧ್ಯಕ್ಷ ಜೆ.ಕೆ.ಸಿದ್ದೇಗೌಡ ಹೇಳಿದರು.

ಹಲವಾರು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ ಎಂದು ವೈದ್ಯಾಧಿಕಾರಿ ಡಾ.ಕಿಶೋರ್‌ ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.