ಹಾಸನ: ‘ಶಾಸಕ ಎಚ್.ಡಿ.ರೇವಣ್ಣ ಕುಟುಂಬದವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂಬುದು ಈಗ ಜಗಜ್ಜಾಹೀರಾಗಿದೆ. ಹಣ, ಅಧಿಕಾರದ ಬಲದ ಎದುರು ನ್ಯಾಯ ಗೆದ್ದಿದೆ’ ಎಂದು ಬಿಜೆಪಿ ಮುಖಂಡ, ವಕೀಲ ಜಿ.ದೇವರಾಜೇಗೌಡ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ., ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ದೇಶದ ನ್ಯಾಯಾಂಗ ವ್ಯವಸ್ಥೆಗೆ ಧನ್ಯವಾದ ತಿಳಿಸುತ್ತೇನೆ’ ಎಂದರು.
‘ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಶಕ್ತಿಗೆ ಸಾಕ್ಷಿ. ವಿಳಂಬವಾದರೆ ಅಪರಾಧಿಗಳು ತಪ್ಪಿಸಿಕೊಳ್ಳಲು ದಾರಿ ಸಿಗುತ್ತದೆ. ಆದರೆ ಈ ಪ್ರಕರಣದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಸಿಕ್ಕಿದೆ’ ಎಂದರು.
‘ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದರೆ ಯಾರೂ ಭಾವುಕರಾಗಬಾರದು. ಅವರಿಂದ ಎಷ್ಟೋ ಹೆಣ್ಣುಮಕ್ಕಳ ಜೀವನ, ಕುಟುಂಬಗಳು ಹಾಳಾಗಿವೆ. ರೇವಣ್ಣ ಕುಟುಂಬದವರು ನಂಬಿಕೆಗೆ ಅನರ್ಹರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.