ADVERTISEMENT

ಬೇಲೂರು ರಥೋತ್ಸವದಲ್ಲಿ ಕುರಾನ್ ಪಠಣ ಸಲ್ಲದು: ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 2:25 IST
Last Updated 30 ಏಪ್ರಿಲ್ 2022, 2:25 IST
ಬೇಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು. ಸಂತೋಷ್‌ ಕೆಂಚಾಂಬ, ನಾಗೇನಹಳ್ಳಿ ಸಂತೋಷ್ ಇದ್ದರು
ಬೇಲೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು. ಸಂತೋಷ್‌ ಕೆಂಚಾಂಬ, ನಾಗೇನಹಳ್ಳಿ ಸಂತೋಷ್ ಇದ್ದರು   

ಬೇಲೂರು: ‘ಮುಂದಿನ ವರ್ಷದಿಂದ ಬೇಲೂರಿನ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಕುರಾನ್ ಪಠಣ ನಿಲ್ಲಸಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀರಾಮಸೇನೆ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಥೋತ್ಸವದಲ್ಲಿ ಕುರಾನ್ ಪಠಣ ನಿಲ್ಲಿಸುವಂತೆ ಮುಜರಾಯಿ ಸಚಿವೆ ಶಶಿಕಲ್ಲಾ ಜೊಲ್ಲೆ ಆದೇಶಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆಯಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಒಂದು ವೇಳೆ ಕುರಾನ್ ಪಠಣ ಮಾಡಿಸಿದರೆ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ದೇಗುಲದ ಮಳಿಗೆಯಲ್ಲಿ ಹಿಂದೂಯೇತರರಿಗೆ ನೀಡಿರುವ ಅಂಗಡಿಗಳನ್ನು ಖಾಲಿ ಮಾಡಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದೂಗಳ ದೌರ್ಬಲ್ಯ, ಹೇಡಿತನದಿಂದ ಅಯೋಧ್ಯೆಯಲ್ಲಿ ದೇಗುಲ ನಿರ್ಮಿಸಲು 500 ವರ್ಷ ಬೇಕಾಯಿತು. 32 ವರ್ಷಗಳ ಹಿಂದೆ ಕಾಶ್ಮೀರದಲ್ಲಿದ್ದ ಹಿಂದೂಗಳಿಗೆ ಚಿತ್ರಹಿಂಸೆ ನೀಡಿ ಹೊರ ಹಾಕಿದ್ದರು. ಭಾರತವನ್ನು ಇಸ್ಲಾಂ ದೇಶವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಹಿಂದೂಗಳಿಗೆ ಭಯ ಹುಟ್ಟಿಸುವ ಉದ್ದೇಶದಿಂದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಗಲಭೆ ಸೃಷ್ಟಿಸಲಾಗಿದೆ’ ಎಂದು ದೂರಿದರು.

ADVERTISEMENT

‘ಮುಸ್ಲಿಮರ ಮನೋಭಾವ ಬದಲಾಗುವವರೆಗೆ ಅವರ ಅಂಗಡಿ ಗಳಲ್ಲಿ ವ್ಯಾಪಾರ ಮಾಡಬೇಡಿ. ಹಲಾಲ್ ಕಟ್ ಮಾಡಿರುವ ಮಾಂಸವನ್ನು ಬಳಸಬೇಡಿ. ಅದು ನೈವೇದ್ಯಕ್ಕೆ ಯೋಗ್ಯವಾಗಿರುವುದಿಲ್ಲ’ ಎಂದರು.

‘ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಮಸೀದಿಗಳಲ್ಲಿ ಮೈಕ್ ಬಳಸದಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 11 ಸಾವಿರ ಮೈಕ್‌ಗಳನ್ನು ಕೆಳಗಿಳಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಏಕೆ ಆಗುತ್ತಿಲ್ಲ? ನಿಮ್ಮ ಕೈಯಲ್ಲಿ ಆಗದಿದ್ದರೆ ನಮಗೆ ಬಿಡಿ, ನಾವು ಮಾಡಿ ತೋರಿಸುತ್ತೇವೆ. ರಾಜ್ಯದ ಸಾವಿರ ದೇಗುಲಗಳಲ್ಲಿ ಮೇ 9ರಂದು ಬೆಳಿಗ್ಗೆ 5ರಿಂದ ಸುಪ್ರಭಾತ, ಹನುಮಾನ್ ಚಾಲೀಸ, ಓಂಕಾರ, ಓಂ ನಮಃ ಶಿವಾಯ ನಾಮಸ್ಮರಣೆಯನ್ನು ಆರಂಭಿಸುತ್ತೇವೆ. ಆಗ ಮೈಕ್ ತೆಗೆಸಲು ಬಂದರೆ, ಮೊದಲು ಮಸೀದಿ ಮೈಕ್ ತೆಗೆಯಿರಿ, ಆಮೇಲೆ ನಮ್ಮ ಕಡೆ ಬನ್ನಿ ಎಂದು ಹೇಳುತ್ತೇವೆ’ ಎಂದರು.

‘ಮುಸ್ಲಿಮರ ವೋಟಿಗಾಗಿ ರಾಜಕಾರಣಿಗಳು ಇಫ್ತಾರ್‌ ಕೂಟ ಏರ್ಪಡಿಸುತ್ತಿದ್ದಾರೆ. ಮಠಾಧಿಪತಿಗಳು ಸಹ ಮಠದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಿರುವುದು ನೋವಿನ ಸಂಗತಿ. ಹುಬ್ಬಳ್ಳಿ ಗಲಭೆಕೋರರಿಗೆ ನೆರವು ನೀಡುತ್ತೇನೆ ಎಂದಿರುವ ಜಮೀರ್‌ ಅಹ್ಮದ್ ನಡೆ ಅಕ್ಷಮ್ಯ ಅಪರಾಧ. ಇದು ಕಿಡಿಗೇಡಿಗಳು, ರೌಡಿಗಳು, ದರೋಡೆಕೋರರು, ದೇಶದ್ರೋಹಿಗಳು, ದೇಗುಲಕ್ಕೆ ಹಾನಿ ಮಾಡಿದವರು, ಪೊಲೀಸರನ್ನು ಕೊಲ್ಲಲು ಯತ್ನಿಸುವವರಿಗೆ ಬೆಂಬಲ ನೀಡುವ ಮನಸ್ಥಿತಿಯಾಗಿದೆ. ಅವರನ್ನು ಶಾಸಕ ಸ್ಥಾನದಿಂದ ಅಮಾನತು ಗೊಳಿಸಬೇಕೆಂದು ರಾಜ್ಯಪಾಲರಿಗೆ ಮನವಿ ನೀಡಲಾಗುವುದು’ ಎಂದರು.

ಶ್ರೀರಾಮಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ್‌ ಕುಲಕರ್ಣಿ ಮಾತನಾಡಿ, ‘ರಾಮನವಮಿ, ಹನುಮ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಯುತ್ತಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂ ಧರ್ಮಾಚರಣೆಗೆ ಕಷ್ಟವಾಗುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಹಿಂದೂಗಳ ವಿರುದ್ಧ ಮಾತನಾಡುತ್ತಿರುವ ಸಾಹಿತಿ ಕೆ.ಎಸ್‌.ಭಗವಾನ್ ಅವರಿಗೆ ತಾಕತ್ತಿದ್ದರೆ ಮುಸ್ಲಿಮರ ವಿರುದ್ಧ ಮಾತನಾಡಲಿ’ ಎಂದು ಸವಾಲು ಹಾಕಿದರು.

ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್‌ ಕೆಂಚಾಂಬ, ಶ್ರೀರಾಮಸೇನೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಹೇಮಂತ್, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ನಾಗೇನಹಳ್ಳಿ ಸಂತೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.