ಸಕಲೇಶಪುರದ ಆನೇಮಹಲ್ ಬಳಿ ಗುಡ್ಡ ಕತ್ತರಿಸಿ, ಕೇವಲ 6 ಅಡಿ ಎತ್ತರಕ್ಕೆ ತಡೆಗೋಡೆ ನಿರ್ಮಾಣ ಮಾಡಿರುವುದರಿಂದ ಒಂದೇ ಮಳೆಗೆ ಗುಡ್ಡ ಕುಸಿದಿದೆ. ಪ್ರಜಾವಾಣಿ ಚಿತ್ರ: ಜಾನೇಕೆರೆ ಆರ್. ಪರಮೇಶ್
ಸಕಲೇಶಪುರ: ನಾಲ್ಕು ದಿನ ಸುರಿದ ಮಳೆಗೇ ಸಕಲೇಶಪುರದಿಂದ–ಮಾರನಹಳ್ಳಿ ನಡುವಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ತಾರು ಕಡೆ ತಡೆಗೋಡೆಗಳು, ಗುಡ್ಡಗಳು ಕುಸಿದಿದ್ದು, ಈ ಮಳೆಗಾಲದಲ್ಲಿ ಭಾರಿ ಅನಾಹುತ ಸಂಭವಿಸುವ ಆತಂಕ ಇಲ್ಲಿನ ಜನರನ್ನು ಕಾಡುತ್ತಿದೆ.
ಮಳೆಗಾಲದಲ್ಲಿ ತೋಟದಗದ್ದೆಯಿಂದ ಮಾರನಹಳ್ಳಿವರೆಗೆ ವಾಹನಗಳನ್ನು ಓಡಿಸುವಾಗ ಜೀವ ಕೈಯಲ್ಲಿ ಇಟ್ಟುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಗುಡ್ಡಗಳನ್ನು 90 ಡಿಗ್ರಿಯಲ್ಲಿ ಕತ್ತರಿಸಿ, ಕೇವಲ 6 ರಿಂದ 8 ಅಡಿ ಎತ್ತರಕ್ಕೆ ನಿರ್ಮಾಣ ಮಾಡಿರುವ ತಡೆಗೋಡೆಗಳು ಒಂದೇ ಮಳೆಗೆ ಹಲವು ಕಡೆದ ಕುಸಿದಿವೆ. ರಸ್ತೆ ಹಾಗೂ ಚರಂಡಿಗಳ ಮೇಲೆ ಕಲ್ಲು ಮಣ್ಣು ಬಂದು ನಿಂತಿದೆ.
ಸುರಿಯುತ್ತಿರುವ ಮಳೆ ನೀರಿನೊಂದಿಗೆ ಮೇಲಿಂದ ಗುಡ್ಡದ ಮಣ್ಣು ಸಹ ಕೊಚ್ಚಿಕೊಂಡು ಬರುತ್ತಿದ್ದು, ಯಾವುದೇ ಸಂದರ್ಭದಲ್ಲಿ ಇಡೀ ಗುಡ್ಡವೇ ರಸ್ತೆಯ ಮೇಲೆ ಬೀಳುವ ಆತಂಕ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
2018 ರಿಂದಲೂ ಪ್ರತಿ ವರ್ಷದ ಮಳೆಗಾಲದಲ್ಲಿ ಗುಡ್ಡ, ತಡೆಗೋಡೆ ಕುಸಿದು ಬೀಳುವುದು, ಸಾವು, ನೋವು, ವಾಹನಗಳ ಸಂಚಾರ ಬಂದ್ ಆಗುವುದು, ಪ್ರಯಾಣಿಕರು ಪರದಾಡುವ ಸಮಸ್ಯೆಯನ್ನು ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳು ಇದುವರೆಗೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಜನರು ದೂರುತ್ತಿದ್ದಾರೆ.
ಹಾಸನ–ಮಾರನಹಳ್ಳಿ ನಡುವಿನೆ 45 ಕಿ.ಮೀ. ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡಿದ್ದು, 2017ರಲ್ಲಿ. ಕಳೆದ 8 ವರ್ಷಗಳಿಂದ ಸಕಲೇಶಪುರ–ಮಾರನಹಳ್ಳಿ ನಡುವಿನ 12 ಕಿ.ಮೀ. ಹೆದ್ದಾರಿ ಕಾಮಗಾರಿ ಒಂದೆಡೆ ಕಳಪೆಯಾಗಿದ್ದು, ಆಮೆಗತಿಯಲ್ಲಿ ನಡೆಯುತ್ತಿದೆ. ಇದುವರೆಗೂ ಶೇ 60 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರತಿ ವರ್ಷ ಸಮಸ್ಯೆ ಮರುಕಳಿಸುತ್ತಲೇ ಇದೆ.
ಚರಂಡಿ ವ್ಯವಸ್ಥೆ ಇಲ್ಲ: ಹಾಸನದಿಂದ ಮಾರನಹಳ್ಳಿವರೆಗೂ ಹೆದ್ದಾರಿಯ ಬದಿಯಲ್ಲಿ ವ್ಯವಸ್ಥಿತವಾದ ಚರಂಡಿ ವ್ಯವಸ್ಥೆ ಇಲ್ಲ.
ಮಳೆ ನೀರು ರಸ್ತೆಯ ಮೇಲೆ ಹೊಳೆಯಂತೆ ಹರಿಯುತ್ತದೆ. ಇದರಿಂದ ಸಹ ರಸ್ತೆ ಕುಸಿತ ಉಂಟಾಗುತ್ತಿದೆ. ಆನೇಮಹಲ್‌ನಿಂದ ಮಾರನಹಳ್ಳಿವರೆಗೆ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ರಸ್ತೆಯ ಮೇಲೆ ನೀರು ಹರಿದು ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿದೆ. ಈ ಹೆದ್ದಾರಿಯಲ್ಲಿ ಕೆಸರುಗದ್ದೆಯ ಸಂಚಾರವಾಗಿದೆ.
ರಸ್ತೆ ವಿಸ್ತರಣೆಗೆ 90 ಡಿಗ್ರಿ ಗುಡ್ಡ ಕತ್ತರಿಸಿ, 6 ರಿಂದ 8 ಅಡಿ ಎತ್ತರಕ್ಕೆ ಗೇಬಿಯನ್ ವಾಲ್ (ಕಲ್ಲುಗಳನ್ನು ಜೋಡಿಸಿ ತಡೆಗೋಡೆ) ನಿರ್ಮಾಣ ಮಾಡಿರುವುದು ಅವೈಜ್ಞಾನಿಕ. ಮಲೆನಾಡಿನಲ್ಲಿ ವರ್ಷದ 6 ತಿಂಗಳು ಮಳೆ ಬೀಳುತ್ತಿದ್ದು, ಇಲ್ಲಿಯ ಮಣ್ಣು ಮೃದು. ಮಳೆ ನೀರಿನೊಂದಿಗೆ ಮಣ್ಣು ಸಹ ಕೊಚ್ಚಿಹೋಗುತ್ತದೆ. ನೀರು ಹಾಗೂ ಮಣ್ಣಿನ ಒತ್ತಡವನ್ನು ಈ ಕಲ್ಲಿನ ತಡೆಗೋಡೆ ತಡೆಯುವುದಿಲ್ಲ. ಹೀಗಾಗಿ ಸಕಲೇಶಪುರ ಮಾರನಹಳ್ಳಿ ನಡುವೆ ಗೇಬಿಯನ್ ವಾಲ್ ಪ್ರತಿ ಮಳೆಗಾಲದಲ್ಲಿ ಕುಸಿದು ಬೀಳುತ್ತಲೇ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
‘ಕಾಮಗಾರಿ ಸಮರ್ಪಕವಾಗಿಲ್ಲ’
ಆನೇಹಲ್‌ನಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಸಮರ್ಪಕವಾಗಿಲ್ಲ. ಪ್ರತಿ ವರ್ಷದ ಮಳೆಗಾಲದಲ್ಲಿ ಗುಡ್ಡ ಕುಸಿತಕ್ಕೆ ಇದೂ ಒಂದು ಕಾರಣ ಎಂದು ಉಪ ವಿಭಾಗಾಧಿಕಾರಿ ಡಾ.ಎಂ.ಕೆ. ಶ್ರುತಿ ಹೇಳಿದ್ದಾರೆ. ಎರಡು ತಿಂಗಳ ಹಿಂದೆಯೇ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಮಳೆಗಾಲದ ಒಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದ್ದರು. ಆದರೂ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ತಡೆಗೋಡೆ ಕುಸಿತ ಉಂಟಾಗುತ್ತಿದೆ. ಈ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂಬುದು ಗೊತ್ತಿದ್ದರೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಹಿಂದಿನ ಹಾಗೂ ಹಾಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಲೋಕೇಶ್ ಮಸ್ತಾರೆ, ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ
ಈ ಹೆದ್ದಾರಿಯಲ್ಲಿ ಯಾವುದೇ ಸಾವು– ನೋವುಗಳು ಗುಡ್ಡ ಕುಸಿತದಿಂದ ಸಮಸ್ಯೆ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳನ್ನೇ ಹೊಣೆ ಮಾಡಲಾಗುವುದು. ನಾನೇ ಖುದ್ದು ಎಂಜಿನಿಯರ್‌ಗಳ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ.ಸಿಮೆಂಟ್ ಮಂಜು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.