ಅರಕಲಗೂಡು: ಪಶ್ಚಿಮ ಘಟ್ಟವು ಜೀವ ವೈವಿಧ್ಯದ ಅನನ್ಯ ತಾಣವಾಗಿದ್ದು ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ. ಕಿಶೋರ್ ಕುಮಾರ್ ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಸನ ಪ್ರಾದೇಶಿಕ ಕಚೇರಿ, ತಾಲ್ಲೂಕು ಆಡಳಿತ, ವಾಲ್ಮೀಕಿ ಮಹಿಳಾ ಸಾಂಸ್ಕೃತಿಕ ಕಲಾ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ‘ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಕೇವಲ ಘೋಷಣೆಗಳು ಸಾಕಾಗುವುದಿಲ್ಲ. ಸರ್ಕಾರ ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನೇ ಬಂದ್ ಮಾಡಿಸಬೇಕು. ಪರಿಸರ ಸಂರಕ್ಷಣೆ ಕುರಿತು ಹಲವಾರು ಕಾನೂನುಗಳು ಜಾರಿಯಲ್ಲಿದ್ದರೂ, ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಂತ ಮುಖ್ಯ. ದೇಶದ ಹಿತ ಹಾಗೂ ಅಭಿವೃದ್ಧಿಗೆ ಪೂರಕವಾಗಿರುವ ಕಾನೂನನ್ನು ಜನರು ಅದನ್ನು ಗೌರವಿಸಬೇಕು’ ಎಂದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ.ಪಂ. ಅಧ್ಯಕ್ಷ ಪ್ರದೀಪ್ ಕುಮಾರ್, ಸಿ.ಡಿ.ಸಿ. ಉಪಾಧ್ಯಕ್ಷ ಬಾಲಾಜಿ, ಪ್ರಾಂಶುಪಾಲ ಎ.ಎಲ್. ಮಂಜುನಾಥ್, ಮಾಜಿ ತಾ.ಪಂ. ಅಧ್ಯಕ್ಷ ನರಸೇಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟರಾಜು ಉಪಸ್ಥಿತರಿದ್ದರು. ಬೇಲೂರಿನ ಚಂದನ ಮತ್ತು ತಂಡದವರು ಪರಿಸರ ಗೀತ ಗಾಯನ ನಡೆಸಿದರು. ಬೀದಿ ನಾಟಕ, ಕಾಲ್ನಡಿಗೆ ಜಾಥಾ, ಸಸಿ ನೆಡುವ ಕಾರ್ಯಕ್ರಮ ನಡೆಸಲಾಯಿತು. ಪರಿಸರ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪಶ್ಚಿಮ ಘಟ್ಟದಲ್ಲಿನ ಪರಿಸರದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚುತ್ತಿದ್ದು ಇದು ವಿನಾಶಕ್ಕೆ ದಾರಿಯಾಗಲಿದೆ. ಮನುಷ್ಯ ಪರಿಸರವನ್ನು ರಕ್ಷಿಸಿಕೊಳ್ಳದಿದ್ದರೆ ಭೂಮಿಯ ಮೇಲಿನ ಜೀವ ಸಂಕುಲವೆ ನಾಶವಾಗುವ ಅಪಾಯ ಎದುರಾಗಲಿದೆಎಚ್.ಎ. ಕಿಶೋರ್ ಕುಮಾರ್ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.