ADVERTISEMENT

ಕ್ರೈಸ್ತ ಸಂಘಟನೆಗಳ ಮೆರವಣಿಗೆ: ಗೂಳಿಹಟ್ಟಿ ಶೇಖರ್‌ ವಿರುದ್ಧ ಪ್ರತಿಭಟನೆ

ಮತಾಂತರ ಆರೋಪ ಸುಳ್ಳು: ಗೂಳಿಹಟ್ಟಿ ಶೇಖರ್‌ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:20 IST
Last Updated 5 ಅಕ್ಟೋಬರ್ 2021, 14:20 IST
ಹಾಸನದಲ್ಲಿ ಮಂಗಳವಾರ ಕ್ರೈಸ್ತ ಸಂಘಟನೆಗಳು ಪ್ರತಿಭಟನೆ ನಡೆಸಿದವು
ಹಾಸನದಲ್ಲಿ ಮಂಗಳವಾರ ಕ್ರೈಸ್ತ ಸಂಘಟನೆಗಳು ಪ್ರತಿಭಟನೆ ನಡೆಸಿದವು   

ಹಾಸನ: ‘ಕ್ಷೇತ್ರದ ಜನರು ಮತ್ತು ನನ್ನ ತಾಯಿಯನ್ನು ಮತಾಂತರ ಮಾಡಲಾಗಿದೆ ಎಂದುಶಾಸಕ ಗೂಳಿಹಟ್ಟಿ ಶೇಖರ್ ಅವರು ಕ್ರೈಸ್ತ ಮಿಷನರಿಗಳ ವಿರುದ್ಧ ಸುಳ್ಳು ಆರೋಪಮಾಡಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಕ್ರೈಸ್ತರ ಹಿತರಕ್ಷಣಾ ವೇದಿಕೆ ಮತ್ತು ಅಖಿಲ ಭಾರತ ಕ್ರೈಸ್ತ ಮಹಾಸಭಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದರು.

‘ಸುಮಾರು 2 ಸಾವಿರ ಜನರನ್ನು ಮತಾಂತರ ಮಾಡಲಾಗಿದೆ ಎಂದು ವಿಧಾನಸಭಾಅಧಿವೇಶನದಲ್ಲಿ ಗೂಳಿಹಟ್ಟಿ ಶೇಖರ್‌ ಅವರು ಕ್ರೈಸ್ತ ಮಿಷನರಿಗಳ ವಿರುದ್ಧ ಸುಳ್ಳು ಆರೋಪಮಾಡಿದ್ದಾರೆ. ಮತಾಂತರ ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತುಅತ್ಯಾಚಾರದ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಅಂತಹ ಪ್ರಕರಣ ನಡೆದಿಲ್ಲ’ ಎಂದು ಪ್ರತಿಭಟನಕಾರರು ತಿಳಿಸಿದರು.

‘ಸಮುದಾಯವನ್ನು ಗುರಿಯಾಗಿರಿಸಿಕೊಂಡು ದೇಶದಾದ್ಯಂತ ಚರ್ಚ್‌ಗಳ ಮೇಲೆ ದಾಳಿ,ಧರ್ಮ ಗುರುಗಳು, ಭಕ್ತರ ಮೇಲೆ ಹಲ್ಲೆ, ಆಸ್ತಿಪಾಸ್ತಿಗೆ ಹಾನಿ ಮಾಡಲಾಗುತ್ತಿದೆ.ಇದಕ್ಕೆಲ್ಲಾ ಸಚಿವ ಆರ್.ಆಶೋಕ್, ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗಳೇ ಕಾರಣ. ಕೆಲ ಸಂಘಟನೆಗಳು ಪ್ರಾರ್ಥನಾಲಯಗಳ ಮೇಲೆ ದಾಳಿ ಮಾಡಿವೆ. ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘ಕ್ರೈಸ್ತ ಮಿಷನರಿಗಳು ದೇಶಕ್ಕೆಕೊಡುಗೆ ನೀಡಿರುವುದನ್ನು ತಿಳಿದುಕೊಳ್ಳಬೇಕು. ಕ್ರೈಸ್ತರು ಶಾಂತಿ ಪ್ರಿಯರು. ಯಾರ ಮೇಲೂ ದಾಳಿ ಮಾಡಿದ ಉದಾಹರಣೆಗಳು ಇಲ್ಲ.ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡದಂತೆ ಕ್ರೈಸ್ತರಿಗೆ ರಕ್ಷಣೆ ನೀಡಬೇಕು, ಪ್ರಾರ್ಥನಾಮಂದಿರಗಳಿಗೆ ಭದ್ರತೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಮಾಡಲಾಗುವುದು’ ಎಂದು ಜಿಲ್ಲಾ ಕ್ರೈಸ್ತರ ಹಿತ ರಕ್ಷಣಾ ವೇದಿಕೆ ಎಚ್ಚರಿಸಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಕ್ರೈಸ್ತರ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್ (ಸ್ಟೀಫನ್) ಪ್ರಕಾಶ್, ಅಖಿಲ ಭಾರತ ಕ್ರೈಸ್ತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಪ್ರಜ್ವಲ್ ಸ್ವಾಮಿ, ರಾಜ್ಯ ಕ್ರೈಸ್ತ ಸಂಘಒಕ್ಕೂಟದ ಸುನೀಲ್ ಕುಮಾರ್, ಜಿಲ್ಲಾಧ್ಯಕ್ಷ ರಾಜೇಶ್, ಉಪಾಧ್ಯಕ್ಷ ಕೆ. ಮೂರ್ತಿ,ಕಾರ್ಯದರ್ಶಿ ಎಚ್.ಎಂ. ಸುರೇಶ್ ಪೌಲ್, ಜಂಟಿ ನಿರ್ದೇಶಕ ಎ.ಬಿ. ಪ್ರಕಾಶ್, ಖಜಾಂಚಿಸ್ಟೀವನ್‍, ಸದಸ್ಯರಾದ ಎಸ್.ಆರ್. ಲಿಂಗರಾಜು, ಜಿ.ಎಸ್. ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.