ಹಾಸನ: ಕನ್ನಡ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲಹಾಸನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ನಗರದ ಹೇಮಾವತಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟಿನೆ ನಡೆಸಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣಗೌಡ ಮಾತನಾಡಿ, ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಹೇಳಿಕೆ ನೀಡಿರುವ ಕಮಲ್ ಹಾಸನ್ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ. ಕನ್ನಡ ಭಾಷೆಯ ಇತಿಹಾಸ ತಿಳಿಯದೆ ಕಮಲಹಾಸನ್ ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದರು. ಅವರ ಥಗ್ ಲೈಫ್ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಆಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಮಲ್ ಹಾಸನ್ ನಟನೆ ಮಾಡಿರುವ ಚಿತ್ರ ಬಿಡುಗಡೆ ಆಗದಂತೆ ತಡೆಯಲು ರಕ್ಷಣಾ ವೇದಿಕೆ ನಿರ್ಧರಿಸಿದ್ದು, ಚಿತ್ರದ ವಿತರಕರು ತಮ್ಮ ಹೂಡಿಕೆ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ತಮಿಳು ಭಾಷೆಯಿಂದ ಕನ್ನಡ ಭಾಷೆ ಉಗಮವಾಯಿತು ಎಂಬ ತಪ್ಪು ಮತ್ತು ದುರುದ್ದೇಶದ ಹೇಳಿಕೆ ನೀಡಿರುವ ಕಮಲ್ ಹಾಸನ್ ಕ್ಷಮೆ ಯಾಚಿಸುವ ಬದಲು, ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿ ಕನ್ನಡಿಗರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರು.
ವೇದಿಕೆಯ ಸದಸ್ಯರಾದ ಮಂಜುನಾಥ್, ಅಮಿತ್, ತೌಫಿಕ್, ಪ್ರದೀಪ್ ಗೌಡ, ಹರೀಶ್, ರಂಗರಾಜ್, ನೌಶಿರ್, ರಿಜ್ವಾನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.