ADVERTISEMENT

ಮಹಾರಾಷ್ಟ್ರ ಸಿ.ಎಂ ಹೇಳಿಕೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 13:37 IST
Last Updated 20 ಜನವರಿ 2021, 13:37 IST
ಹಾಸನದ ಹೇಮಾವತಿ ಪ್ರತಿಮೆ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹಾಸನದ ಹೇಮಾವತಿ ಪ್ರತಿಮೆ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಹಾಸನ: ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುತ್ತೇನೆ ಎಂದಿರುವ ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಕಾರ್ಯಕರ್ತರು ಬುಧವಾರ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದಕ್ಕೆ ಉದ್ಧವ್‌ ಠಾಕ್ರೆ ಜೀವ ತುಂಬುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಬೆಳಗಾವಿ ಮತ್ತು ಇತರ ಪ್ರದೇಶಗಳು ಕರ್ನಾಟಕದ ಅವಿಭಾಜ್ಯ ಅಂಗಗಳಾಗಿವೆ. ರಾಜಕೀಯಪ್ರೇರಿತವಾದ ಉದ್ಧಟತನದ ಹೇಳಿಕೆ ಕೊಡುವುದು ಸೂಕ್ತವಲ್ಲ. ತಣ್ಣಗಾಗಿದ್ದ ಗಡಿ ವಿಷಯವನ್ನು ಮತ್ತೆ ಕೆಣಕಿದ್ದಾರೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪಟೇಲ್ ಮಾತನಾಡಿ, ‘ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಸಿ.ಎಂ ಈ ರೀತಿಯ ಹೇಳಿಕೆ ನೀಡಿದ್ದು, ಜನರ ನಡುವೆ ದ್ವೇಷದ ಭಾವನೆ ಬಿತ್ತುತ್ತಿದ್ದಾರೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್‌ ವರದಿಯೇ ಅಂತಿಮ. ನೆಲ-ಜಲ-ಭಾಷೆಯ ರಕ್ಷಣೆ ವಿಷಯದಲ್ಲಿ ರಾಜಿ ಇಲ್ಲ.ರಾಜ್ಯದಲ್ಲಿ ಹಲವು ಭಾಷಿಕ ಜನರು ವಾಸಿಸುತ್ತಿದ್ದರೂ ಕನ್ನಡಿಗರು ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಅಕ್ಕಪಕ್ಕದ ರಾಜ್ಯಗಳು ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದರೂ ಸಹಿಸಿಕೊಡು ಶಾಂತಿಯುತವಾಗಿ ಸಹಬಾಳ್ವೆ ಮಾಡುತ್ತಿದ್ದೇವೆ. ಸಾಮರಸ್ಯ, ಸೌಹಾರ್ದ ಸಂಬಂಧಗಳಿಗೆ ಮಾರಕವಾಗುವ ರಾಜಕಾರಣಿಗಳ ಇಂತಹ ಹೇಳಿಕೆಗಳಿಗೆ ಕಡಿವಾಣ ಬೀಳಬೇಕು’ ಎಂದರು.

ಕರ್ನಾಟಕ–ಮಹಾರಾಷ್ಟ್ರ ಗಡಿ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಈ ರೀತಿಯ ಹೇಳಿಕೆಗಳನ್ನು ನೀಡಿರುವುದು ಖಂಡನೀಯ. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಧವ್‌ ಠಾಕ್ರೆ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕರ್ನಾಟಕ ರಾಜ್ಯದ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರಘು ಗೌಡ, ಉಪಾಧ್ಯಕ್ಷ ಸುನೀಲ್ ಗೌಡ, ವಿದ್ಯಾರ್ಥಿ ಘಟಕದ ಮನು, ಆಟೋ ಘಟಕದ ಅಣ್ಣಪ್ಪ, ಮನೋಜ್, ಕಾರ್ಮಿಕ ಘಟಕದ ದಿಲೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.