ADVERTISEMENT

ನೀರಾವರಿ ನಿಗಮ ಕಚೇರಿ ಎದುರು ಧರಣಿ‌

ಪುನರ್ವಸತಿ ಕಾಮಗಾರಿ ವಿಳಂಬಕ್ಕೆ ಗ್ರಾಮಸ್ಥರ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 14:05 IST
Last Updated 22 ಫೆಬ್ರುವರಿ 2021, 14:05 IST
ಹಾಸನ ತಾಲ್ಲೂಕಿನ ಗೊರೂರಿನ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹಾಸನ ತಾಲ್ಲೂಕಿನ ಗೊರೂರಿನ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಹಾಸನ: ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಪುನರ್ವಸತಿ ಕಾಮಗಾರಿ ವಿಳಂಬ ಖಂಡಿಸಿ
ಗೊರೂರಿನ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ಕಾಂಗ್ರೆಸ್ ಮುಖಂಡ ಹೊನ್ನವಳ್ಳಿ ಗಣೇಶ್
ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಆಲೂರು ತಾಲ್ಲೂಕು ಮಗ್ಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನೂರಾರು ಹಳ್ಳಿಗಳು ಹೇಮಾವತಿ
ಹಿನ್ನೀರಿನಿಂದ ಮುಳುಗಡೆಯಾಗಿವೆ. ರೈತರು 30-40 ವರ್ಷಗಳಿಂದ ಜಮೀನು, ಮನೆ, ಮಠ ಕಳೆದುಕೊಂಡು
ಪುನರ್ವಸತಿ ಪಡೆದ ಹಳ್ಳಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು
ಆರೋಪಿಸಿದರು.

ಗ್ರಾಮಗಳಲ್ಲಿ ರಸ್ತೆಗಳು ಸರಿ ಇಲ್ಲದೇ ರೈತರು ಬೆಳೆದ ಬೆಳೆಗಳನ್ನು ಸಕಾಲಕ್ಕೆ ಮಾರುಕಟ್ಟೆಗೆ ಸಾಗಿಸಲು ಆಗದ
ಕಾರಣ ನಷ್ಟ ಅನುಭವಿಸಬೇಕಾಗಿದೆ. ರಸ್ತೆ ತೀವ್ರ ಹದಗೆಟ್ಟಿರುವುದರಿಂದ ಬಸ್ ಸಂಚಾರವಿಲ್ಲದೆ ಶಾಲಾ
ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತಿದೆ ದೂರಿದರು.

ADVERTISEMENT

ಈ ಹಿಂದೆ ಕಾವೇರಿ ನೀರಾವರಿ ನಿಗಮದಿಂದ ಪುನರ್ವಸತಿ ಹಳ್ಳಿಗಳ ಅಭಿವೃದ್ಧಿಗಾಗಿ ಕಾಮಗಾರಿಗಳು
ಮಂಜೂರಾಗಿದ್ದು, ಕೆಲವು ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಕೆಲವು ಅರ್ಧಕ್ಕೆ ಸ್ಥಗಿತಗೊಂಡಿವೆ.
ರಾಮೇನಹಳ್ಳಿ, ಮಣಿಗನಹಳ್ಳಿ, ಕ್ಯಾತನಹಳ್ಳಿ, ಕಡಬಗಾಲ, ಗಂಜಿಗೆರೆ ಹರೀಗೌಡನಹಳ್ಳಿ ಏತ ನೀರಾವರಿ
ಯೋಜನೆಗಳು ಸಂಪೂರ್ಣ ಹಾಳಾಗಿದ್ದು, ಇದುವರೆಗೂ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್, ‘ಕೊರೊನಾ ಕಾರಣ
ಕೆಲವೊಂದು ಕಾಮಗಾರಿ ವಿಳಂಬವಾಗಿದ್ದು, ಏಪ್ರಿಲ್ ಮೇ ತಿಂಗಳೊಗೆ ಕಾಮಗಾರಿ
ಪೂರ್ಣಗೊಳಿಸಲಾಗುವುದು. ರಸ್ತೆ, ದೇವಾಲಯ, ಏತನೀರಾವರಿ ಯೋಜನೆಗಳ ಕಾಮಗಾರಿ ಮತ್ತೊಮ್ಮೆ
ಪರಿಶೀಲನೆ ಮಾಡಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮಗೊಳ್ಳಲಾಗುವುದು. ಏತ ನೀರಾವರಿ ಕಾಮಗಾರಿಗೆ
ಬಜೆಟ್‍ನಲ್ಲಿ ₹150 ಕೋಟಿ ಅನುಮೋದನೆ ದೊರೆತರೆ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು’
ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಹಳ್ಳಿಗಳ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.