ADVERTISEMENT

ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆ ಕೈಬಿಡಲು ಆಗ್ರಹ

ಡಿ.ಸಿ ಕಚೇರಿ ಎದುರು ಅತಿಥಿ ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 16:47 IST
Last Updated 18 ಆಗಸ್ಟ್ 2020, 16:47 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸಿದರು   

ಹಾಸನ: ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಧಿಸೂಚನೆ ಕೈಬಿಬೇಕು ಎಂದು ಆಗ್ರಹಿಸಿ ಸಿಐಟಿಯು, ಡಿವೈಎಫ್‌ಐ, ಕೆಪಿಆರ್‌ಎಸ್‌ ಸಂಘಟನೆಗಳ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಧಿಸೂಚನೆಯಿಂದಾಗಿ 2400ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ವರ್ಷದಿಂದ ಕೆಲಸ ಮಾಡುತ್ತಿರುವವರನ್ನೇ ಹಿರಿತನ ಆಧರಿಸಿ ಕಾಯಂ ಮಾಡಿಕೊಂಡರೆ ಅನುಕೂಲವಾಗುತ್ತದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಇಲಾಖೆ ಅವಕಾಶ ಕಲ್ಪಿಸಿಲ್ಲ. ಈ ಹಿಂದೆ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಸಂಪುಟ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಸರ್ಕಾರ ಅದನ್ನು ಪರಿಗಣಿಸಿಲ್ಲ ಎಂದು ಅಳಲು ತೋಡಿಕೊಂಡರು.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಬೇಕು. ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 14,564 ಅತಿಥಿ ಉಪನ್ಯಾಸಕರು ವೇತನವಿಲ್ಲದೆ ಪರದಾಡುವಂತಾಗಿದೆ. ಲಾಕ್ ಡೌನ್‍ನಿಂದ ಕಾಲೇಜಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರಿಗೆ ವೇತನ ಇಲ್ಲವಾಗಿದೆ. ಐದು ತಿಂಗಳಿಂದ ದುಡಿಮೆ ಹಾಗೂ ಆದಾಯ ಇಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರತಿಭಟನಕಾರರು ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ಡಿವೈಎಫ್‍ಐ ಮುಖಂಡ ಎಂ.ಜಿ. ಫೃಥ್ವಿ, ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಅತಿಥಿ ಉಪನ್ಯಾಸಕರಾದ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಕೆ.ಎನ್. ಯತೀಶ್, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಹಾಗೂ ಇತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.