ADVERTISEMENT

ಆರೋಗ್ಯ ಸಿಬ್ಬಂದಿಗೆ ಸೂಕ್ತ ವೇತನ ನೀಡಲು ಪುಟ್ಟಸ್ವಾಮಿ ಆಗ್ರಹ

ಆರೋಗ್ಯ, ಕುಟುಂಬ ಕಲ್ಯಾಣ ಸೇವೆ ನೌಕರರ ಸಂಘದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 14:15 IST
Last Updated 17 ಫೆಬ್ರುವರಿ 2021, 14:15 IST
ಪುಟ್ಟಸ್ವಾಮಿ
ಪುಟ್ಟಸ್ವಾಮಿ   

ಹಾಸನ: ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಗೆ
ಸೂಕ್ತ ವೇತನ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ನೌಕರರ ಸಂಘದ ಅಧ್ಯಕ್ಷ ಎ.
ಪುಟ್ಟಸ್ವಾಮಿ ಒತ್ತಾಯಿಸಿದರು.

ಇಲಾಖೆಯ ಅರೆ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡುವುದರ ಜತೆಗೆ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವಿಲೀನಗೊಳಿಸಬೇಕು. ರಾಜ್ಯದಲ್ಲಿ 69,667 ಕಾಯಂ ಹುದ್ದೆಗಳ ಪೈಕಿ39,139 ಹುದ್ದೆ ಮಾತ್ರ ಭರ್ತಿಯಾಗಿದೆ. 1010 ಹಂಗಾಮಿ ನೌಕರರಿದ್ದು, ಖಾಲಿ ಇರುವ 30,528 ಹುದ್ದೆಗಳನ್ನು ಶೀಘ್ರವೇ ತುಂಬಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನಿವೃತ್ತಿ ಬಳಿಕ ಆರೋಗ್ಯ ಇಲಾಖೆ ನೌಕರರು ಪಿಂಚಣಿ, ಭವಿಷ್ಯ ನಿಧಿ ಪಡೆಯಲು ಪ್ರಯಾಸ ಪಡುತ್ತಿದ್ದಾರೆ. ಈ ರೀತಿಯ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಪ್ರಯೋಗ ಶಾಲಾ, ಕ್ಷ - ಕಿರಣ ತಂತ್ರಜ್ಞರು, ಫಾರ್ಮಾಸಿಸ್ಟ್, ಇಸಿಜಿ ಟೆಕ್ನಿಷಿಯನ್ ಹುದ್ದೆಯಲ್ಲಿ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದು, ಎಲ್ಲರನ್ನು ಕಾಯಂ ಮಾಡಿಕೊಳ್ಳಬೇಕು ಎಂದರು.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದಗಳ ನೌಕರರ ಗುತ್ತಿಗೆ, ಹೊರಗುತ್ತಿಗೆ ಮತ್ತು ಇತರ ಯಾವುದೇ ಮೂಲಗಳಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ನಂಜುಂಡಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ, ಶಿವಸ್ವಾಮಿ, ವಾಣಿ ಹಾಗೂ ಎಚ್. ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.