ಆಲೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರಿಗಾಗಿ ಅಳವಡಿಸಿರುವ ಎಕ್ಸ್‌ಪ್ರೆಸ್ ಫೀಡರ್‌ನಲ್ಲಿ ಕೂಡಲೆ ವಿದ್ಯುತ್ ಸರಬರಾಜು ಮಾಡದಿದ್ದರೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಟುಂಬಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ತೊಂದರೆಯಾಗಬಾರದೆಂದು ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಎಕ್ಸ್‌ಪ್ರೆಸ್ ಫೀಡರ್ ಮಾಡಲಾಗಿದೆ. ಸುಮಾರು ₹25 ಲಕ್ಷ ಠೇವಣಿ ಸಹ ಇಡಲಾಗಿದೆ. ಸುಮಾರು ಮೂರು ವರ್ಷಗಳಿಂದ ಈ ಫೀಡರ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸದೆ, ಆಗಾಗ ಆಗುವ ವಿದ್ಯುತ್ ವ್ಯತ್ಯಯದಿಂದ ಮಳೆಗಾಲದಲ್ಲೂ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆಯಾಗಿದೆ ಎಂದು ಸದಸ್ಯ ತೌಫಿಕ್ ಅವರು ವಿಷಯ ಪ್ರಸ್ತಾಪ ಮಾಡಿದರು.
ಇದಕ್ಕೆ ಧ್ವನಿಗೂಡಿಸಿದ ಮುಖ್ಯಾಧಿಕಾರಿ ಮಂಜುನಾಥ್ ಅವರು, ಪ್ರತಿದಿನ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿರುವ ದಾಖಲಾತಿಯನ್ನು ಪ್ರದರ್ಶಿಸಿದರು. ಈ ಕೂಡಲೆ ಕ್ರಮ ಕೈಗೊಂಡು ನಿರಂತರವಾಗಿ ವಿದ್ಯುತ್ ಸಂಪರ್ಕ ಒದಗಿಸದಿದ್ದರೆ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಸಭೆಯಲ್ಲಿ ಸೆಸ್ಕ್ ಎಂಜಿನಿಯರ್‌ಗೆ ತಿಳಿಸಿದರು.
ಸೆಸ್ಕ್ ಸಹಾಯಕ ಎಂಜಿನಿಯರ್ ಕುಮಾರ್ ಉತ್ತರಿಸಿ, ಆಲೂರಿಗೆ ಪ್ರತ್ಯೇಕ ವಿದ್ಯುತ್ ಪ್ರಸರಣ ಕೇಂದ್ರವಿಲ್ಲದೆ ತೊಂದರೆಯಾಗಿದೆ. ಬಹುತೇಕ ವಿದ್ಯುತ್ ಲೈನುಗಳು ಗದ್ದೆಗಳಲ್ಲಿ ಹಾದು ಹೋಗಿವೆ. ಗಾಳಿ, ಮಳೆಯಲ್ಲಿ ಅಡಚಣೆಯಾದ ಸಂದರ್ಭದಲ್ಲಿ ದುರಸ್ತಿಗೊಳಿಸಲು ವಿಳಂಬವಾಗಲಿದೆ. ಎಕ್ಸ್‌ಪ್ರೆಸ್ ಫೀಡರ್ ಸಂಪರ್ಕ ಕಲ್ಪಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಟ್ಟಣದಲ್ಲಿ ಸಂಚಾರ ಸುಗಮಕ್ಕೆ ಪೊಲೀಸರ ಸಹಕಾರ ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೆರಾಬೇಗಂ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಗೆ ಅಗತ್ಯವಿರುವ ಮಾಸಿಕ ಬಾಡಿಗೆ ಆಧಾರದ ಮೇಲೆ ಕರೆಯಲಾಗಿರುವ ಕಾರಿನ ಟೆಂಡರನ್ನು ಅನುಮೋದಿಸಲು, ಫುಡ್ ಕೋರ್ಟ್ ನಿರ್ಮಾಣ, ರೆಕಾರ್ಡ್ ರೂಮ್ ನವೀಕರಣ, ವೆಂಕಟೇಶ್ವರ ಕಲ್ಯಾಣ ಮಂಟಪದ ಹತ್ತಿರ 25 ಮೀ. ಚರಂಡಿ ನಿರ್ಮಾಣ, ಫಿಲ್ಟರ್ ಹೌಸ್ ಮತ್ತು ಪಂಪ್ ಹೌಸ್‍ಗಳಲ್ಲಿ ಮೋಟಾರು ದುರಸ್ತಿಗೆ, ನೀರು ಸರಬರಾಜು ವಿಭಾಗಕ್ಕೆ ಸಾಮಗ್ರಿಗಳನ್ನು ಸರಬರಾಜು ಮಾಡಲು ವಾರ್ಷಿಕ ನಿರ್ವಹಣೆ, ಕೊಳವೆಬಾವಿ ವಾರ್ಷಿಕ ನಿರ್ವಹಣೆ, ಸಭಾಂಗಣಕ್ಕೆ ಪೀಠಠೋಪಕರಣಗಳನ್ನು ಅಳವಡಿಸುವುದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಕೊಠಡಿ ನವೀಕರಣ, ಕಚೇರಿ ಮಾಲ್ಭಾಗದಲ್ಲಿ ಶೀಟ್ ಹಾಕಿಸಲು, ಬೀದಿ ದೀಪ ನಿರ್ವಹಣೆ ಟೆಂಡರನ್ನು ಅನುಮೋದಿಸಿ ಸಭೆ ಒಪ್ಪಿಗೆ ಸೂಚಿಸಿತು.
2025 ಜನವರಿಯಿಂದ ಮೇ ವರೆಗೆ ಆಗಿದ್ದ ಜಮಾ ಖರ್ಚಿನ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಪಕ್ಕದಲ್ಲಿರುವ ಕಟ್ಟಡದ ನೆಲ ಅಂತಸ್ತನ್ನು ಬಾಡಿಗೆಗೆ ನೀಡಿ, ಮೊದಲ ಅಂತಸ್ತಿನಲ್ಲಿ ಅಗತ್ಯವಾದಲ್ಲಿ ಸಭಾಂಗಣವನ್ನು ವರ್ಗಾಯಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿ ಗಡಿ ಪ್ರದೇಶದೊಳಗಿರುವ ಜಾಗವನ್ನು ಗುರುತಿಸಿ, ಅಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಉಬ್ಬುಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಓಡಾಡಲು ಭಯಭೀತರಾಗಿದ್ದಾರೆ. ಕೂಡಲೆ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡುವಂತೆ ಸಭೆಯಲ್ಲಿ ಎಲ್ಲ ಸದಸ್ಯರು ಆಗ್ರಹಿಸಿದರು. ಗಡಿ ಪ್ರದೇಶದಂಚಿನಲ್ಲಿ ಆಲೂರು ಪಟ್ಟಣ ಪಂಚಾಯಿತಿಗೆ ಹೊಂದಿಕೊಂಡಿರುವ ಬೈರಾಪುರ, ಹುಣಸವಳ್ಳಿ ಪಂಚಾಯಿತಿಗೊಳಪಡುವ ಕೆಲ ನಿವಾಸಿಗಳನ್ನು ನಮ್ಮ ಪಂಚಾಯಿತಿಗೆ ಸೇರಿಸಿಕೊಳ್ಳಲು ಮತ್ತು ಯಾವುದೆ ವಾರ್ಡಿಗೆ ನೂತನವಾಗಿ ಹೆಸರು ನಾಮಕರಣ ಮಾಡಲು ಸರ್ಕಾರದಿಂದ ಅನುಮೋದನೆ ಪಡೆಯಬೇಕು ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.
ಸಭೆಯಲ್ಲಿ ಸದಸ್ಯರಾದ ತೌಫಿಕ್, ಧರ್ಮ, ಹರೀಶ್, ಸಂತೋಷ್, ಖಾಲೀದ್ ಪಾಷ, ಸಂದೇಶ್, ಶೀಲಾ, ಮತ್ತು ಸಿಬ್ಬಂದಿಗಳಾದ ಲಲಿತಮ್ಮ, ಜಯಲಕ್ಷ್ಮಿ, ಗಣೇಶ್ ಉಪಸ್ಥಿತರಿದ್ದರು
ಮುಖ್ಯರಸ್ತೆಯಂಚಿಗೆ ಬಂದಿರುವ ಅಂಗಡಿಗಳು: ಕ್ರಮಕ್ಕೆ ಒತ್ತಾಯ
ಪಟ್ಟಣದ ಮುಖ್ಯ ರಸ್ತೆ ಬದಿಯಲ್ಲಿರುವ ಅಂಗಡಿಗಳು ರಸ್ತೆಯಂಚಿಗೆ ಎಡತಾಕಿರುವುದರಿಂದ ಜನಸಾಮಾನ್ಯರು ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯಾಗಬೇಕು. ಪ್ರತಿದಿನ ಸಂಚಾರ ಪೊಲೀಸರು ಗಸ್ತು ತಿರುಗಿ ನಿಯಮ ಮೀರಿದವರನ್ನು ಎಚ್ಚರಿಸಬೇಕು ಎಂದರು. ಸಭೆಯಲ್ಲಿ ಹಾಜರಿದ್ದ ಎಸ್‌ಐ ಜನಾಬಾಯಿ ಕಡಪಟ್ಟಿಯವರು ರಸ್ತೆಯಂಚಿನಲ್ಲಿ ಮೀಸಲಾಗಿರುವ ಜಾಗವನ್ನು ಗುರುತು ಮಾಡಿದರೆ ನಿಯಮ ಮೀರಿದವರಿಗೆ ಕಾನೂನು ಕ್ರಮ ಜರುಗಿಸಲಾಗುವುದು. ಕೆಲ ಬೃಹತ್ ವಾಹನಗಳು ಬೈರಾಪುರ ಟೋಲ್ ತಪ್ಪಿಸಿಕೊಂಡು ಪಟ್ಟಣದೊಳಗೆ ಬರುತ್ತಿವೆ. ಮಳೆ ಕಡಿಮೆಯಾದ ನಂತರ ಅಂತಹ ವಾಹನಗಳಿಗೆ ದಂಡ ವಿಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.