ADVERTISEMENT

ಭೂ ಮಾಲೀಕರಿಗೆ ಪರಿಹಾರ ಒದಗಿಸಿ

ರಾಷ್ಟ್ರೀಯ ಹೆದ್ದಾರಿ 373ರ ರಸ್ತೆ ಕಾಮಗಾರಿ: ಡಿ.ಸಿ ಸೂಚನೆ‌

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 13:17 IST
Last Updated 3 ನವೆಂಬರ್ 2020, 13:17 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ರೈತ ಮುಖಂಡರ ಸಭೆ ನಡೆಸಿದರು.
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ರೈತ ಮುಖಂಡರ ಸಭೆ ನಡೆಸಿದರು.   

ಹಾಸನ: ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಹಾಗೂ ಭೂ ಮಾಲೀಕರಿಗೆ ಸಲ್ಲಬೇಕಾದ ಪರಿಹಾರವನ್ನು ನಿಯಮಾನುಸಾರ ಸಕಾಲದಲ್ಲಿ ಒದಗಿಸಿ ಕಾಮಗಾರಿ ನಡೆಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸ್ಥಳೀಯ ರೈತ ಮುಖಂಡರು ಮಂಗಳವಾರ ಭೇಟಿ ಮಾಡಿದ ಸಂದರ್ಭ ಅವರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸ್ಥಳೀಯ ರೈತ ಮುಖಂಡರು ಕಾಡಾನೆ ಹಾವಳಿ ಸೇರಿದಂತೆ ಇತರೆ ಸಮಸ್ಯೆಗಳನ್ನು ಡಿ.ಸಿ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಡಾನೆ ಹಾವಳಿ ಸಂಬಂಧಿಸಿದಂತೆ ಶೀಘ್ರ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ವನ್ಯ ಜೀವಿಗಳಿಂದ ಆಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ಅರಣ್ಯ
ಇಲಾಖೆಗೆ ತಿಳಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಳೆನರಸೀಪುರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆನಿಸ್, ರೈತ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.