ಅರಕಲಗೂಡು: ‘ಪಿಎಸ್‌ಐ ನೇಮಕಾತಿ ಅಕ್ರಮ ತನಿಖೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಸ್ತಕ್ಷೇಪ ಮಾಡಬಾರದು. ಸತ್ಯಾಂಶ ಮುಚ್ಚಿಡದೆ ಪ್ರಕರಣದಲ್ಲಿ ಭಾಗಿಯಾದವರ ಹೆಸರನ್ನು ಸಿಐಡಿ ಬಹಿರಂಗಪಡಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ‘ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಯಾಗಬೇಕು’ ಎಂದು ಒತ್ತಾಯಿಸಿದರು.
ಸಚಿವ ಡಾ.ಅಶ್ವತ್ಥನಾರಾಯಣ ಸಂಬಂಧಿ ಭಾಗಿಯಾಗಿರುವ ಕುರಿತು ಪ್ರಸ್ತಾಪಿಸಿ, ‘ಯಾರಾದರೂ ಲಂಚ ಪಡೆದವನು ಪಡೆದಿದ್ದಾನೆ ಅಂತ ಹೇಳು ತ್ತಾನೆಯೇ? ಲಂಚ ಕೊಟ್ಟವನು ಲಂಚ ಕೊಟ್ಟಿದ್ದೀನಿ ಅಂತ ಹೇಳುತ್ತಾನೆಯೇ? ಈಗೆಲ್ಲಾ ಆಚೆ ಬಂದಿಲ್ವಾ? ಜೈಲಿಗೆ ಹಾಕಿರುವ ಹುಡುಗರನ್ನು ಕೇಳಿ’ ಎಂದು ಗುಡುಗಿದರು.
ಅಕ್ರಮದ ಮೂಲ ಹುಡುಕಿ ಹೋದರೆ ಸರ್ಕಾರವೇ ಉಳಿಯುವುದಿಲ್ಲ ಎಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ, ‘ಕುಮಾರಸ್ವಾಮಿ ಹೇಳಿರುವುದರಲ್ಲಿ ಸತ್ಯ ಕಾಣುತ್ತಿದೆ. ಅಕ್ರಮದಲ್ಲಿ ಕಿಂಗ್‌ಪಿನ್ ಇರೋದು ಸತ್ಯ. ಆ ಕಿಂಗ್‌ಪಿನ್ ಕೆಲವರನ್ನು ಬಿಡಿಸುತ್ತಿದ್ದಾರೆ. ಅಧಿಕಾರಿಗಳು ಮತ್ತು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಮಾತ್ರ ಬಂಧಿಸುತ್ತಿದ್ದಾರೆ. ಮಂತ್ರಿಗಳ ರಕ್ಷಣೆ ಇಲ್ಲದೆ ಈ ಹಗರಣ ಆಗಲು ಸಾಧ್ಯವಿಲ್ಲ. ಗೃಹ ಸಚಿವ, ಡಾ.ಸಿ.ಎನ್. ಅಶ್ವತ್ಥನಾರಾಯಣ ಫೋನ್ ಮಾಡಿ ಕೆಲವರನ್ನು ಬಿಡಿಸಿದ್ದಾರೆ’ ಎಂದು ಆರೋಪಿಸಿದರು.
ತಿಹಾರ್ ಜೈಲಿಗೆ ಡಿ.ಕೆ.ಶಿವಕುಮಾರ್ ಪುಸ್ತಕ ಓದಲು ಹೋಗಿದ್ರಾ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿ, ‘ಯಡಿಯೂರಪ್ಪ, ಅಮಿತ್ ಶಾ ಹಾಗೂ ಅವರ ಪಕ್ಷ ಶಾಸಕರು, ಮಾಜಿ ಸಚಿವರು ಜೈಲಿಗೆ ಏಕೆ ಹೋಗಿದ್ದರು? ಯಾವ ವಚನ ಓದಲು ಹೋಗಿದ್ದರು? ಅವರ ರೀತಿ ನಾನು ಯಾವುದೇ ಆರೋಪ ಹೊತ್ತು ಹೋಗಿಲ್ಲ. ರಾಜಕೀಯ ಷಡ್ಯಂತ್ರ ರೂಪಿಸಿ ಕಳುಹಿಸಿದ್ದರು’ ಎಂದರು.
‘ಸರ್ಕಾರಿ ಹುದ್ದೆಗೆ ಎಷ್ಟು ಹಣ ನಡೆಯುತ್ತಿದೆ ಎಂಬುದರ ಕುರಿತು ‘ಕಾಸಿದರಷ್ಟೇ ಸರ್ಕಾರಿ ಹುದ್ದೆ’ ಎಂಬ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ವರದಿ ಓದಿದರೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.
‘ಮಹಿಳೆಯರ ಹೆಸರಿನಲ್ಲಿ ಸವಲತ್ತು ವಿತರಣೆ’
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರವು ಸ್ವತ್ತುಗಳ ರೂಪದಲ್ಲಿ ನೀಡುವಂತಹ ಸೌಲಭ್ಯಗಳನ್ನು ಮಹಿಳೆ ಹೆಸರಿಗೆ ನೋಂದಣಿ ಮಾಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಮುಖಂಡ ಶ್ರೀಧರ್ ಗೌಡ ಅಭಿಮಾನಿಗಳ ಬಳಗವು ಪಟ್ಟಣದ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಹಾಗೂ ಉಚಿತ ಆರೋಗ್ಯ ಮೇಳದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
‘ಸರ್ಕಾರವು ನಿವೇಶನ, ಮನೆ ಹಂಚಿಕೆ, ಹಸು, ಕುರಿಗೆ ಸಹಾಯಧನ ಸೇರಿದಂತೆ ಸ್ವತ್ತುಗಳ ರೂಪದಲ್ಲಿ ನೀಡುವ ಯಾವುದೇ ಸೌಲಭ್ಯವನ್ನು ಮಹಿಳೆ ಹೆಸರಿನಲ್ಲೇ ನೀಡಲಾಗುವುದು. ಇದರಿಂದ ಮಹಿಳೆಯರ ಸಬಲೀಕರಣಗೊಳಿಸುವುದು ಇದರ ಉದ್ದೇಶ. ಈ ಅಂಶವನ್ನು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ನಟಿಯರಾದ ಮಿಲನ ನಾಗರಾಜ್, ಸಾನ್ವಿ, ಕೆಪಿಸಿಸಿ ಕಾರ್ಯದರ್ಶಿ ಅಕ್ಕಯ್ ಪದ್ಮಶಾಲಿ, ಕಾಮಿಡಿ ಕಿಲಾಡಿ ಖ್ಯಾತಿಯ ಸಂತೋಷ್ ಮಾತನಾಡಿದರು.
ಹಾಸ್ಯ ನಟ ಸಾಧು ಕೋಕಿಲಾ, ಪಕ್ಷದ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ, ಮಡಿಕೇರಿ ಜಿ.ಪಂ ಸದಸ್ಯೆ ಕುಮುದಾ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಎಚ್.ಪಿ.ಶ್ರೀನಿವಾಸ್, ಮುಖಂಡರಾದ ಎಂ.ಕೆ.ಶೇಷೇಗೌಡ, ಎಚ್.ಎಸ್. ವಿಜಯಕುಮಾರ್, ಬಿ.ಕೆ.ರಂಗಸ್ವಾಮಿ, ಎಚ್.ಕೆ.ಮಹೇಶ್, ಮುನಿಸ್ವಾಮಿ, ದೇವರಾಜೇಗೌಡ, ಅಬ್ದುಲ್ ಸಮದ್, ಖಡಾಖಡಿ ಪೀರ್ ಸಾಬ್ ಇದ್ದರು.
***
ಧರ್ಮ ಹಾಗೂ ಜಾತಿಗಳ ನಡುವೆ ಬೆಂಕಿ ಹಚ್ಚಿ ಸಮಾಜದ ಸಾಮರಸ್ಯ ಹಾಳು ಮಾಡುವ ಶಕ್ತಿಗಳ ಕುರಿತು ಮಹಿಳೆಯರು ಜಾಗೃತಿ ಮೂಡಿಸಬೇಕು.
–ಉಮಾಶ್ರೀ, ಚಿತ್ರನಟಿ
***
ನಾನು ನಾಯಕನಾಗಲು ರಾಜಕೀಯಕ್ಕೆ ಬಂದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ, ಕೆಲಸ ಮಾಡಿಕೊಡಲು ಬಂದಿದ್ದೇನೆ
–ಎಚ್.ಪಿ.ಶ್ರೀಧರ್ ಗೌಡ, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.