ADVERTISEMENT

ಪಿಟಿಸಿಎಲ್‌ ಕಾಯ್ದೆ ಬಲಿಷ್ಠಗೊಳಿಸಲು ಆಗ್ರಹ

ಕಾನೂನಿಗೆ ಸಮಗ್ರ ತಿದ್ದುಪಡಿ ತರಲು ದಲಿತ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 12:53 IST
Last Updated 25 ಸೆಪ್ಟೆಂಬರ್ 2019, 12:53 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು  ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು  ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿತು.   

ಹಾಸನ: 1978ರ ಭೂ ಪರಭಾರೆ ಹಾಗೂ ಪಿಟಿಸಿಎಲ್ ಕಾಯ್ದೆ ನಿಯಮಾವಳಿಗಳಿಗೆ ಸಮಗ್ರ ತಿದ್ದುಪಡಿ ತಂದು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.

ಹೇಮಾವತಿ ಪ್ರತಿಮೆಯಿಂದ ಎನ್‍ಆರ್ ವೃತ್ತ ಮಾರ್ಗವಾಗಿ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿರುವ ಶೇಕಡಾ 25 ರಷ್ಟು ದಲಿತರು ಸವರ್ಣೀಯರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ. ಸರ್ವರನ್ನೂ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲೆತ್ತಬೇಕೆಂಬ ಉದ್ದೇಶದಿಂದ ದಿವಂಗತ ಡಿ. ದೇವರಾಜು ಅರಸು ಹಾಗೂ ಬಿ. ಬಸವಲಿಂಗಪ್ಪ ದಲಿತರಿಗೆ ಮಂಜೂರಾದ ಭೂಮಿ ದಲಿತೇತರಿಗೆ ಪರಭಾರೆ ಆಗಬಾರದೆಂದು 1978ರಲ್ಲಿ ಪಿಟಿಸಿಎಲ್ ಕಾಯ್ದೆ ಜಾರಿಗೊಳಿಸಿದರು. ಆದರೆ, ಕಾಯ್ದೆಯಲ್ಲಿ ಕೆಲ ಲೋಪದೋಷಗಳಿದ್ದು ಸರಿಪಡಿಸಬೇಕಿದೆ. ಕಾನೂನಿಗೆ ಸಮಗ್ರ ತಿದ್ದುಪಡಿ ತರಲು ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಕಂದಾಯ ಇಲಾಖೆ ಕಾಯ್ದೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಇದರಿಂದ ದಲಿತರ ಭೂಮಿ ಹಕ್ಕು ರಕ್ಷಣೆಗೆ ಕುತ್ತು ಒದಗಿದೆ. ರಾಜ್ಯದ ಎಲ್ಲ ಎಸ್‌ಸಿ, ಎಸ್‌ಟಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರು ಒಟ್ಟಾಗಿ ಮಹತ್ವಪೂರ್ಣ ಕೆಲಸದಲ್ಲಿ ತೊಡಗಬೇಕಿದೆ. 1961ರ ಇನಾಂತಿ ಭೂಮಿ ಮರು ಮಂಜೂರಾತಿ ಕಾಯ್ದೆಯ ಸ್ಥಿತಿಯೂ ಪಿಟಿಸಿಎಲ್‍ನಂತೆ ಅಸ್ಪಷ್ಟವಾಗಿದ್ದು, ಅದನ್ನೂ ಇಲ್ಲಿಯೇ ವಿಲೀನಗೊಳಿಸಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಸಚಿವ ಸಂಪುಟ ಸಭೆ ಕರೆದು ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಪಿಟಿಸಿಎಲ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರುವ ನಿಟ್ಟಿನಲ್ಲಿ ದಶಕಗಳಿಂದ ಹೋರಾಟದಲ್ಲಿ ತೊಡಗಿರುವ ಹಿರಿಯರ ಸಲಹೆ ಪಡೆಯಬೇಕು. ಸಾಮಾಜಿಕ ಕಾರ್ಯಕರ್ತರು, ವಕೀಲರು, ಹೋರಾಟಗಾರರು ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಕಾಯ್ದೆಗೆ ತಿದ್ದುಪಡಿ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಈ ಕರಡು ಪರಿಶೀಲಿಸಲು ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು. ಸಮಿತಿಯ ಸಮಗ್ರ ತಿದ್ದುಪಡಿ ಅಳವಡಿಸಿದ ನಂತರ ಸಚಿವ ಸಂಪುಟದ ಒಪ್ಪಿಗೆ ಪಡೆದು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಅನುಮೋದನೆಗೊಳಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡರಾದ ಡಾ. ಎಂ. ವೆಂಕಟಸ್ವಾಮಿ, ಶ್ರೀಧರ್ ಕಲವೀರ್, ವೈ.ಎಸ್. ದೇವೂರು, ಜಿಗಣಿ ಶಂಕರ್, ಎಂ. ಸೋಮಶೇಖರ್, ಆರ್.ಎಂ.ಎನ್. ರಮೇಶ್, ಎಚ್.ಕೆ. ಸಂದೇಶ್, ಆರ್. ಮರಿಜೋಸೆಫ್, ಕೆ. ಈರಪ್ಪ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.