ADVERTISEMENT

ಅರಕಲಗೂಡು: ಧಾರ್ಮಿಕ ಕಾರ್ಯದಿಂದ ಅಂತರಂಗ ಶುದ್ಧಿ

ಶತಕ ಪೂರ್ಣಿಮಾ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 7:16 IST
Last Updated 6 ಫೆಬ್ರುವರಿ 2023, 7:16 IST
ಅರಕಲಗೂಡಿನಲ್ಲಿ ಭಾನುವಾರ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದ ಅಂಗವಾಗಿ ನಡೆದ ಸ್ವಾಮೀಜಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾತಂಡ ಜನರ ಗಮನ ಸೆಳೆಯಿತು
ಅರಕಲಗೂಡಿನಲ್ಲಿ ಭಾನುವಾರ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದ ಅಂಗವಾಗಿ ನಡೆದ ಸ್ವಾಮೀಜಿಗಳ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾತಂಡ ಜನರ ಗಮನ ಸೆಳೆಯಿತು   

ಅರಕಲಗೂಡು: ‘ಮನುಷ್ಯನ ಮಾನಸಿಕ ನೆಮ್ಮದಿ ಹಾಗೂ ಅಂತರಂಗ ಶುದ್ಧಿಗೆ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗುರು ತೋರಿದ ದಾರಿ, ತಿಂಗಳ ಮಾಮನ ತೇರು ಶತಕ ಪೂರ್ಣಿಮಾ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಅಂತರಂಗದ ಸಾಧನೆಗೆ ಗಮನ ನೀಡದೇ ಕೇವಲ ದೇಹ ಪೋಷಣೆ ಮಾಡಿದರೆ ಬದುಕಿನಲ್ಲಿ ಏನೂ ಸಾಧನೆ ಆಗುವುದಿಲ್ಲ. ಮನುಷ್ಯ ಬದುಕಿನ ಅರ್ಥವನ್ನು ತಿಳಿಯಬೇಕು. ಭೂಮಿಯ ಮೇಲೆ ಬದುಕಿದರಷ್ಟೇ ಸಾಲದು, ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬ ಕುರಿತು ಚಿಂತನೆ ಅಗತ್ಯ. ಇಲ್ಲದಿದ್ದರೆ ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ವ್ಯತ್ಯಾಸ ಇರುವುದಿಲ್ಲ. ಹಣ ಗಳಿಕೆಯೊಂದೇ ಜೀವನದ ಗುರಿಯಾಗಬಾರದು. ಗಳಿಸುವುದನ್ನು ಪ್ರಾಮಾಣಿಕ ರೀತಿಯಲ್ಲಿ ಗಳಿಸಿ. ಅದರ ಒಂದಷ್ಟು ಭಾಗವನ್ನು ನೊಂದವರ ಅಭ್ಯುದಯಕ್ಕೆ ಬಳಸಿದಾಗ ಮಾತ್ರ ಬದುಕಿನ ಶ್ರೇಷ್ಠತೆ ಕಾಣಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ದೇಹದ ಹಸಿವಿಗೆ ಪ್ರಾಮುಖ್ಯತೆ ನೀಡದೇ ಮನಸ್ಸಿನ ಹಸಿವೆಗೆ ಆಧ್ಯಾತ್ಮಿಕ ಚಿಂತನೆಯ ಪೋಷಣೆ ನೀಡಿದಾಗ ಅಂತರಂಗದ ಬೆಳಕನ್ನು ಕಾಣಲು ಸಾಧ್ಯ. ಮನಸ್ಸಿನಲ್ಲಿ ಕತ್ತಲೆಯನ್ನು ತುಂಬಿಕೊಂಡು ಜಗತ್ತು ಕತ್ತಲೆಯಾಗಿದೆ ಎಂದು ಹಪಹಪಿಸಿದರೆ ಪ್ರಯೋಜನವಿಲ್ಲ. ಸದ್ಗುಣಗಳನ್ನು ಮೈಗೂಡಿಸಿಕೊಂಡು ಗುರುಗಳ ಮಾರ್ಗದರ್ಶನ, ಧಾರ್ಮಿಕ ಚಿಂತನೆ ಮೂಲಕ ಮನಸ್ಸಿನ ಕತ್ತಲನ್ನು ದೂರಮಾಲು ಸಾಧ್ಯವಾಗುತ್ತದೆ. ಇಂತಹ ಸತ್‌ಚಿಂತನೆಗಳನ್ನು ಮೂಡಿಸಲು ಹುಣ್ಣಿಮೆ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಭಕ್ತರು ಇದರ ಪ್ರಯೋಜನ ಪಡೆದು ಉತ್ತಮ ಬದುಕನ್ನು ರೂಪಿಸಿಕೊಳ್ಳುವಂತೆ’ ಸಲಹೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ, ಜನರಲ್ಲಿ ಸತ್ ಚಿಂತನೆ, ಸದ್ಗುಣಗಳನ್ನು ಬೆಳೆಸುವ ಉದ್ದೇಶದಿಂದ ಹುಣ್ಣಿಮೆ ಕಾರ್ಯಕ್ರಮ ನಡೆಸಲು ಹಿಂದಿನ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಯೋಚಿಸಿದ್ದರು. ಅವರ ಆಶಯವನ್ನು ನನಸಾಗಿಸುವ ಉದ್ದೇಶದಿಂದ ಪ್ರಾರಂಭಿಸಿದ ಈ ಹುಣ್ಣಿಮೆ ಕಾರ್ಯಕ್ರಮ, ಭಕ್ತರು ಮತ್ತು ಸಮಾಜದ ಎಲ್ಲ ಜನತೆಯ ಸಹಕಾರದಿಂದ ಶತಕ ಪೂರ್ಣಿಮೆಯಾಗಿದೆ ಎಂದರು.

ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಸಚಿವ ಎ.ಮಂಜು, ಶ್ರವಣಬೆಳಗೊಳ ಕ್ಷೇತ್ರದ ಶಾಸಕ, ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಸಿ. ಬಾಲಕೃಷ್ಣ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಚಿಲುಮೆ ಮಠದ ಅವರಣದಿಂದ ಮೆರವಣಿಗೆಯ ಮೂಲಕ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು. 1008 ಪೂರ್ಣ ಕುಂಭಗಳನ್ನು ಹೊತ್ತ ಸುಮಂಗಲಿಯರು , ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಬಳಿಕ ವೇದಿಕೆ ಮುಂಭಾಗದಲ್ಲಿ ಧಾನ್ಯಗಳ ರಾಶಿಪೂಜೆ ನೆರವೇರಿಸಲಾಯಿತು. ವಿವಿಧ ಮಠಾಧೀಶರಾದ ಶಿವಪುತ್ರನಾಥ ಸ್ವಾಮೀಜಿ, ಜಯದೇವ ಸ್ವಾಮೀಜಿ, ಶಿವಲಿಂಗಾನಂದ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಮುಖಂಡರಾದ ಎಂ.ಟಿ.ಕೃಷ್ಣೇಗೌಡ, ಡಾ.ದಿನೇಶ್ ಬೈರೇಗೌಡ, ಶ್ರೀಧರ್ ಗೌಡ, ಎಚ್. ಯೋಗಾರಮೇಶ್, ಮುದ್ದನಹಳ್ಳಿ ರಮೇಶ್ ಉಪಸ್ಥಿತರಿದ್ದರು.

‘ಮಠದಿಂದ ರಚನಾತ್ಮಕ ಕಾರ್ಯ’

ಆದಿಚುಂಚನಗಿರಿ ಮಹಾಸಂಸ್ಥಾನ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರವನ್ನು ಒಳಗೊಂಡಂತೆ ನಿರ್ವಹಿಸುತ್ತಿರುವ ಕಾರ್ಯ ರಚನಾತ್ಮಕವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.

‘ಶಿಕ್ಷಣ ಮತ್ತು ಆರೋಗ್ಯ ದೇಶದ ಬುನಾದಿಯಾಗಿದೆ. ಗ್ರಾಮೀಣ ಪ್ರದೇಶದ ಜನರು ಬದುಕು ಅರಸಿ ನಗರಗಳತ್ತ ವಲಸೆ ಹೋಗುತ್ತಿರುವ ಕಾರಣ ಕೃಷಿ ಕ್ಷೇತ್ರ ಸೊರಗುತ್ತಿದೆ. ರೈತರು ಕೃಷಿ ಕೆಲಸ ತ್ಯಜಿಸಿ ಪಟ್ಟಣದ ಜೀವನಕ್ಕೆ ಮಾರು ಹೋಗಿದ್ದಾರೆ. ಇದು ಹೀಗೆ ಮುಂದುವರಿದರೆ ಆಹಾರದ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಗ್ರಾಮೀಣ ಜನರು ಗುಣಮಟ್ಟದ ಶಿಕ್ಷಣ ಪಡೆದು, ಉತ್ತಮ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳುವುದು ಅಗತ್ಯ. ವಿದ್ಯಾರ್ಥಿಗಳು ಹಾಗೂ ಯುವಕರು ವಿವೇಕಾನಂದರು ಬೋಧಿಸಿದ ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮ ವಿಶ್ವಾಸ ಹಾಗೂ ನಿರ್ಭಯತೆ ಎಂಬ ಪಂಚಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.