ADVERTISEMENT

ಪುಷ್ಪಗಿರಿ ರಾಷ್ಟ್ರೀಯ ಉತ್ಸವಕ್ಕೆ ಧಕ್ಕೆ ತರಬೇಡಿ: ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 10:50 IST
Last Updated 23 ಡಿಸೆಂಬರ್ 2019, 10:50 IST
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಹಳೇಬೀಡು ಸಮೀಪದ ಪುಷ್ಪಗಿರಿಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಹಳೇಬೀಡು: ಜ.4 ಹಾಗೂ 5ರಂದು ನಡೆಯುವ ಪುಷ್ಪಗಿರಿ ರಾಷ್ಟ್ರೀಯ ಉತ್ಸವದಲ್ಲಿ ವಿವಿಧ ರಾಜಕೀಯ ಮುಖಂಡರು ಭಾಗವಹಿಸುತ್ತಾರೆ. ಆ ಸಂದರ್ಭದಲ್ಲಿ ಪರ, ವಿರೋಧ ಘೋಷಣೆಗಳನ್ನು ಕೂಗಿ ಕಾರ್ಯಕ್ರಮಕ್ಕೆ ಧಕ್ಕೆ ತರಬಾರದು ಎಂದು ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದರು.

ಪುಷ್ಪಗಿರಿ ಮಠದಲ್ಲಿ ಭಾನುವಾರ ನಡೆದ ಪುಷ್ಪಗಿರಿ ರಾಷ್ಟ್ರೀಯ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹಳೇಬೀಡಿನ ರಾಜನಶಿರಿಯೂರು ವೃತ್ತದಲ್ಲಿ ಜ.4ರಂದು ಮಧ್ಯಾಹ್ನ 1 ಗಂಟೆಗೆ ಚಲನಚಿತ್ರ ನಟ ಪುನೀತ್‌ ರಾಜ್‌ಕುಮಾರ್‌ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ವಿವಿಧ ಗೋಷ್ಠಿಗಳು ನಡೆಯುತ್ತವೆ. ರಾತ್ರಿ 9ಕ್ಕೆ ಸಂಗೀತ, ನೃತ್ಯ ಅಕಾಡೆಮಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ADVERTISEMENT

ಜ.5ರಂದು ಬೆಳಿಗ್ಗೆಯಿಂದ ಸಂಜೆವರೆಗೆ ವಿವಿಧ ಗೋಷ್ಠಿಗಳು ನಡೆಯುತ್ತವೆ. 10ಕ್ಕೂ ಹೆಚ್ಚು ಸಚಿವರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಅಂದು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಲಾಗುತ್ತದೆ. ಸಾಂಕೇತಿಕವಾಗಿ 5 ಸ್ವಸಹಾಯ ಸಂಘಗಳಿಗೆ ಅನುದಾನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ನೇಮಕ ಮಾಡಿ ಯೋಜನೆಯ ರೂಪುರೇಷೆ ಸಿದ್ಧಪಡಿಸಲಾಗುವುದು. ನೀರಾವರಿ ಯೋಜನೆ ಹಾಗೂ ಬೇಲೂರು ತಾಲ್ಲೂಕಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಸೇರಿದಂತೆ ವಿವಿಧ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಪುಷ್ಪಗಿರಿ ಮಹಾ ಸಂಸ್ಥಾನದ ಕಾರ್ಯದರ್ಶಿ ಗ್ರಾನೈಟ್‌ ರಾಜಶೇಖರ್ ಮಾತನಾಡಿ, ‘ಪುಷ್ಪಗಿರಿ ಉತ್ಸವದಲ್ಲಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಭಿಷೇಕ ದಶಮಾನೋತ್ಸವ ನಡೆಸಿ, ಗುರು ವಂದನೆ ಸಲ್ಲಿಸಲಾಗುವುದು’ ಎಂದರು.

ಮುಖಂಡರಾದ ಬೆಣ್ಣೂರು ರಾಜಶೇಖರ್‌, ಜಿ.ವಿ.ಟಿ. ಬಸವರಾಜು, ಎಚ್‌.ಎನ್‌.ಯೋಗೀಶ್‌, ಸಿದ್ದರಾಜು, ಹುಲೀಗೌಡ, ದಿನೇಶ್‌, ಗೆಂಡೇಹಳ್ಳಿ ಚೇತನ್‌, ರವಿಕುಮಾರ್, ಧನಂಜಯ, ಶಿಕ್ಷಕ ಆರ್‌.ಬಿ.ಲೋಕೇಶ್‌, ನಿವೃತ್ತ ಎಂಜಿನಿಯರ್‌ ಸಿದ್ದನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.