ADVERTISEMENT

ಬೇಲೂರು-ಹಾಸನ ರಾಷ್ಟ್ರೀಯ ಹೆದ್ದಾರಿ 373: ಚತುಷ್ಪಥ ಕಾಮಗಾರಿ ಶೀಘ್ರ ಆರಂಭ

₹216 ಕೋಟಿ ಬಿಡುಗಡೆ: ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 6:54 IST
Last Updated 25 ಜೂನ್ 2020, 6:54 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಬೇಲೂರು-ಹಾಸನ ರಾಷ್ಟ್ರೀಯ ಹೆದ್ದಾರಿಗೆ ರಾಜ್ಯ ಹೆದ್ದಾರಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದು, ₹ 216 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇಕಾಮಗಾರಿ ಆರಂಭವಾಗಲಿದೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿ 373 ಇದಾಗಿದ್ದು, 33 ಕಿ.ಮೀ. ವಿಸ್ತೀರ್ಣದ ಚತುಷ್ಪಥ ನಿರ್ಮಾಣ ಆಗಲಿದೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. 2020ರ ಮೇ 25ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮತ್ತೊಂದು ಪತ್ರ ಬರೆದಿದ್ದರು. ಜೂನ್ 19ರಂದು ಅನುದಾನ ಬಿಡುಗಡೆಯಾಗಿದ್ದು, ಸಚಿವರೂ ಪತ್ರ ಬರೆದು ಕಾಮಗಾರಿಯ ಮಾಹಿತಿ ನೀಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚನ್ನರಾಯಪಟ್ಟಣದಿಂದ ಕೇರಳದ ಮಾಕುಟ್ಟಾ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು ಕೋರಿದ್ದು, ₹ 1,500 ಕೋಟಿ ವೆಚ್ಚದ ಯೋಜನಾ ವರದಿ ಸಲ್ಲಿಸಲಾಗಿದೆ. ಹೆದ್ದಾರಿಗೆ ನಂಬರ್ ಕೊಟ್ಟರೆ ಆ ಹಣವು ಬಿಡುಗಡೆಯಾಗುತ್ತದೆ. 191 ಕಿ.ಮೀ. ರಸ್ತೆ ಇದಾಗಿದ್ದು, ಚನ್ನರಾಯಪಟ್ಟಣ, ಹೊಳೆನರಸೀಪುರ, ಅರಕಲಗೂಡು, ಕೊಡ್ಲಿಪೇಟೆ, ವಿರಾಜಪೇಟೆ ಮಾರ್ಗ ವಾಗಿ ಮಾಕುಟ್ಟಾ ತಲುಪಲಿದೆ ಎಂದರು.

ADVERTISEMENT

‘ಜಿಲ್ಲೆಯ ಅಭಿವೃದ್ಧಿಗಾಗಿ ನಾವು ಯಾವಾಗಲೂ ಸಿದ್ಧ ಎಂಬುದನ್ನು ದೇವೇಗೌಡರು ಸಾಬೀತುಪಡಿಸುತ್ತಿದ್ದಾರೆ ’ಎಂದರು.

ಪತ್ರಕರ್ತರಿಗೂ ಪ್ಯಾಕೇಜ್‌ ನೀಡಿ

‘ಕೊರೊನಾ ಪರಿಸ್ಥಿತಿಯಲ್ಲೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ರಾಜ್ಯದ ಎಲ್ಲಾ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಜೊತೆಗೆ ಪತ್ರಕರ್ತರಿಗೆ ವಿಮೆ ಮಾಡಿಸಬೇಕು’ ಎಂದು ಶಾಸಕ ಎಚ್‌.ಡಿ. ರೇವಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಮಾಧ್ಯಮದವರಿಗೆ ನೆರವಾದರೆ ಸರ್ಕಾರಕ್ಕೇನು ನಷ್ಟವಾಗುವುದಿಲ್ಲ. ತಲಾ ₹ 10 ಸಾವಿರದಂತೆ ಮುಂದಿನ ನಾಲ್ಕು ತಿಂಗಳು ವಿತರಿಸಿದರೆ ಅನುಕೂಲವಾಗುತ್ತದೆ. ಆರೋಗ್ಯ ವಿಮೆಯನ್ನೂ ಮಾಡಿಸಬೇಕು. ಈ ಬಗ್ಗೆ ಸಿಎಂಗೆ ಪತ್ರ ಬರೆಯಲಾಗುವುದು. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಪ್ರಕಟಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.