
ಶ್ರವಣಬೆಳಗೊಳ: ಹೋಬಳಿಯಲ್ಲಿ 7 ಗ್ರಾಮ ಪಂಚಾಯಿತಿಗಳಿದ್ದು, ಅದರ ವ್ಯಾಪ್ತಿಯಲ್ಲಿ ಈ ಸಲ ಉತ್ತಮ ಮಳೆಯಾಗಿದ್ದು, ಮುಂಗಾರು ಹಂಗಾಮಿನಲ್ಲಿ ಏಕ ದಳ ಧಾನ್ಯಗಳಾದ ರಾಗಿ, ಮೆಕ್ಕೆಜೋಳ, ಜವಾರಿ ಜೋಳ, ಇನ್ನಿತರೆ ಬೆಳೆಗಳ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿಯನ್ನು ನಿರೀಕ್ಷಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ಕೆ. ಹೇಳಿದರು.
ಮುಂಗಾರಿನ ಮಳೆಗೆ ಏಕದಳ ಧಾನ್ಯಗಳಾದ ರಾಗಿ, 4,250 ಹೆಕ್ಟೇರ್, ಜೋಳ 1,425 ಹೆಕ್ಟೇರ್, ದ್ವಿದಳ ಧಾನ್ಯಗಳಾದ ಅಲಸಂದಿ 315 ಹೆಕ್ಟೇರ್, ಹೆಸರು 25 ಹೆಕ್ಟೇರ್, ಅವರೆ 50 ಹೆಕ್ಟೇರ್, ತೊಗರಿ 20 ಹೆಕ್ಟೇರ್, ಉದ್ದು, 20 ಹೆಕ್ಟೇರ್, ಎಳ್ಳು 12 ಹೆಕ್ಟೇರ್, ಪ್ರದೇಶದ ಜಮೀನಿನಲ್ಲಿ ಬಿತ್ತನೆಯಾಗಿದೆ. ಅದರಲ್ಲಿ ದ್ವಿದಳ ಧಾನ್ಯಗಳ ಬೆಳೆಗಳ ಕಟಾವು ಆಗಿದೆ. ಕಟಾವು ಆದ ಜಮೀನಿನಲ್ಲಿ ಇದೀಗ 10 ಹೆಕ್ಟೇರ್ ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹುರುಳಿ ಸಹ ಈ ಭಾಗದ ರೈತರು ಬಿತ್ತನೆ ಮಾಡಿದ್ದು, ಅದು ಹುಲುಸಾಗಿ ಬೆಳೆದಿದೆ ಎಂದರು.
ಇನ್ನು ನೀರಾವರಿ ಆಶ್ರಯದ ವಿವಿಧ ತಳಿಯ ಬೀಜಗಳಿಂದ ಭತ್ತದ ಬಿತ್ತನೆ ಮತ್ತು ಗದ್ದೆಯಲ್ಲಿ ಸಸಿಗಳ ನಾಟಿ 100 ಹೆಕ್ಟೇರ್‌ನಲ್ಲಿ ಕಬ್ಬು 160 ಹೆಕ್ಟೇರ್‌ನಲ್ಲಿ ರೈತರು ಬೆಳೆದಿದ್ದಾರೆ ಎಂದರು.
ಇನ್ನು ಕೆಲವು ರೈತರು ರಾಗಿ ಪೈರು ತಡವಾಗಿ ಬಿತ್ತನೆ ನಾಟಿ ಮಾಡಿದ್ದು, ಅದು ಇದೀಗ ಹೂವಿನಿಂದ ತೆನೆಗಳಾಗಿದ್ದು, ಒಂದೆರಡು ಸಲ ಕಾಳು ಬಲಿಯಲು ಮಳೆಯ ಅವಶ್ಯಕತೆ ಇದೆ ಎಂದರು.
ಕೃಷಿ ರೈತ ಸಂಪರ್ಕದ ಕೃಷಿ ಅಧಿಕಾರಿ ಜಿ.ವಿ. ದಿನೇಶ್, ತಾಂತ್ರಿಕ ಸಹಾಯಕ ಕೃಷಿ ವ್ಯವಸ್ಥಾಪಕಿ ಜಿ.ಕೆ. ಅರ್ಪಿತಾ ಮಾತನಾಡಿ, ರೈತರು ತೊಂದರೆ ಆಗದಂತೆ ಏಪ್ರಿಲ್, ಮೇನಲ್ಲಿ ಕೃಷಿ ಇಲಾಖೆ ವತಿಯಿಂದ ಸಮಯಕ್ಕೆ ಸರಿಯಾಗಿ ಕೃಷಿ ಸಲಕರಣೆ ಬಿತ್ತನೆ ಬೀಜ, ಗೊಬ್ಬರಗಳನ್ನು ರೈತರ ಮನೆ ಬಾಗಿಲಿಗೆ ವಿತರಿಸಲಾಗಿತ್ತು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.