ADVERTISEMENT

ಹಾಸನ ಜಿಲ್ಲೆಯಲ್ಲಿ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 10:50 IST
Last Updated 16 ಆಗಸ್ಟ್ 2020, 10:50 IST
ಹಾಸನ ನಗರದ ಮಹಾವೀರ ವೃತ್ತದಲ್ಲಿ ಮಳೆ ನೀರು ನಿಂತಿರುವ ದೃಶ್ಯ
ಹಾಸನ ನಗರದ ಮಹಾವೀರ ವೃತ್ತದಲ್ಲಿ ಮಳೆ ನೀರು ನಿಂತಿರುವ ದೃಶ್ಯ   

ಹಾಸನ: ನಗರವೂ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.

ಶನಿವಾರ ರಾತ್ರಿ ಆರಂಭಗೊಂಡ ಜಿಟಿಜಿಟಿ ಮಳೆ, ಆಗಾಗ್ಗೆ ಬಿಡುವು ನೀಡಿ ಸುರಿಯುತ್ತಿದೆ. ಹಾಸನ ತಾಲ್ಲೂಕಿನ ಶಾಂತಿ ಗ್ರಾಮ, ಕಂಚಟ್ಟಹಳ್ಳಿ, ಸಾಲಗಾಮೆ, ಅರಕಲಗೂಡು, ಬೇಲೂರು, ಸಕಲೇಶಪುರ, ಹೆತ್ತೂರು, ರಾಮನಾಥಪುರ, ಹೊಳೆನರಸೀಪುರದಲ್ಲಿ ಸಾಧಾರಣ ಮಳೆಯಾಗಿದೆ. ಹಾಸನ ನಗರದಲ್ಲಿ ಜಿಟಿಜಿಟಿ ಮಳೆಯಾಗುತ್ತಿದ್ದ ಕಾರಣ ಜನರು ಮನೆಗಳಿಂದ ಹೊರ ಬರಲಿಲ್ಲ. ವಾಹನಗಳ ಸಂಚಾರವೂ ಕಡಿಮೆ ಇತ್ತು.

ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ನದಿಗಳಿಗೆ ಬಿಡುಗಡೆ ಮಾಡುತ್ತಿರುವ ನೀರಿನ ಪ್ರಮಾಣವೂ ಜಾಸ್ತಿಯಾಗಿದೆ. ಜಲಾಶಯಕ್ಕೆ 11,741 ಕ್ಯುಸೆಕ್ ಒಳಹರಿವಿದ್ದು, 6420 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. 2922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 29.21.40 ಅಡಿ ನೀರು ಸಂಗ್ರಹವಾಗಿದೆ.

ADVERTISEMENT

ಭಾನುವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಹಾಸನ ತಾಲ್ಲೂಕಿನ ಸಾಲಗಾಮೆ 2 ಮಿ.ಮೀ., ಹಾಸನ 26.4 ಮಿ.ಮೀ., ದುದ್ದ 4 ಮಿ.ಮೀ., ಶಾಂತಿಗ್ರಾಮ 3 ಮಿ.ಮೀ., ಕಟ್ಟಾಯ 2 ಮಿ.ಮೀ. ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹೊಸೂರು 19 ಮಿ.ಮೀ., ಶುಕ್ರವಾರ ಸಂತೆ 23 ಮಿ.ಮೀ., ಹೆತ್ತೂರು 25 ಮಿ.ಮೀ., ಯಸಳೂರು 20 ಮಿ.ಮೀ., ಸಕಲೇಶಪುರ 15 ಮಿ.ಮೀ., ಬಾಳ್ಳುಪೇಟೆ 7 ಮಿ.ಮೀ., ಬೆಳಗೋಡು 72.5 ಮಿ.ಮೀ., ಮಾರನಹಳ್ಳಿ 42 ಮಿ.ಮೀ., ಹಾನುಬಾಳು 10 ಮಿ.ಮೀ., ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.