ADVERTISEMENT

ಹಿರೀಸಾವೆ: ಮನೆಗಳಿಗೆ ನುಗ್ಗುವ ಮಳೆ ನೀರು

ಹೊಸ ಸೇತುವೆ ಬಳಿ ಮಣ್ಣು, ಜಲ್ಲಿ ಕಲ್ಲು: ಡಾಂಬರ್ ಇಲ್ಲದೇ ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 4:04 IST
Last Updated 22 ಅಕ್ಟೋಬರ್ 2025, 4:04 IST
ಹಿರೀಸಾವೆ ರಾಜ್ಯ ಹೆದ್ದಾರಿ 8 ರ ಸೇತುವೆ ಮತ್ತು ರಸ್ತೆ ನಡುವೆ ಕಂದಕ ನಿರ್ಮಾಣವಾಗಿ, ಬೈಕ್, ವಾಹನ ಚಲಾಯಿಸಲು ಕಷ್ಟಪಡಬೇಕಿದೆ 
ಹಿರೀಸಾವೆ ರಾಜ್ಯ ಹೆದ್ದಾರಿ 8 ರ ಸೇತುವೆ ಮತ್ತು ರಸ್ತೆ ನಡುವೆ ಕಂದಕ ನಿರ್ಮಾಣವಾಗಿ, ಬೈಕ್, ವಾಹನ ಚಲಾಯಿಸಲು ಕಷ್ಟಪಡಬೇಕಿದೆ    

ಹಿರೀಸಾವೆ: ಇಲ್ಲಿನ ಡಿಸಿಸಿ ಬ್ಯಾಂಕ್ ಸಮೀಪ ರಾಜ್ಯ ಹೆದ್ದಾರಿ 8ರಲ್ಲಿ ಹೊಸದಾಗಿ ನಿರ್ಮಾಣ ಮಾಡಿದ ಸೇತುವೆ ಬಳಿ, ಮಳೆ ನೀರಿಗೆ ಮಣ್ಣು, ಸಿಮೆಂಟ್, ಜಲ್ಲಿ ಕಲ್ಲು ಕೊಚ್ಚಿ ಹೋಗಿದ್ದು, ವಾಹನ ಓಡಿಸಲು ಚಾಲಕರು ಪರದಾಡುತ್ತಿದ್ದಾರೆ.

ಇದು ಗ್ರಾಮದ ಪ್ರಮುಖ ರಸ್ತೆಯಾಗಿದ್ದು, ರಾಷ್ಟ್ರಿಯ ಹೆದ್ದಾರಿ 75 ಸೇರಿದಂತೆ ಹೋಬಳಿಯ ಹಲವು ಗ್ರಾಮಗಳಿಗೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘ, ರೈತ ಸಂಪರ್ಕ ಕೇಂದ್ರ, ಡಿಸಿಸಿ ಬ್ಯಾಂಕ್, ಶ್ರೀಕಂಠಯ್ಯ ವೃತ್ತ ಸೇರಿದಂತೆ ಬಹುತೇಕ ಕಡೆಗಳಿಗೆ ಸಾರ್ವಜನಿಕರು ಈ ರಸ್ತೆ ಮೂಲಕ ಓಡಾಡಬೇಕಿದೆ. ಈ ಹಿಂದೆ ಇದ್ದ ಸ್ವಾತಂತ್ರ್ಯ ಪೂರ್ವದ ಸೇತುವೆ ಶಿಥಿಲವಾಗಿತ್ತು. ಲೋಕೋಪಯೋಗಿ ಇಲಾಖೆಯ ₹ 1 ಕೋಟಿ ವೆಚ್ಚದಲ್ಲಿ 3 ತಿಂಗಳ ಹಿಂದೆ ಸೇತುವೆಯ ಪುನರ್‌ ನಿರ್ಮಾಣ ಮಾಡಲಾಗಿದೆ. ಆದರೆ ಡಾಂಬರ್ ಮತ್ತು ಸಿಮೆಂಟ್ ಹಾಕದೆ, ಮಣ್ಣನ್ನು ಸುರಿದು, ಸಮತಟ್ಟು ಮಾಡಲಾಗಿತ್ತು. ಜನರು ಮಣ್ಣಿನ ದೂಳಿನಲ್ಲಿ ಓಡಾಡುತ್ತಿದ್ದರು.

ತಿಂಗಳ ಹಿಂದೆ ಮಣ್ಣು, ಜಲ್ಲಿ ಕಲ್ಲು ಕಿತ್ತು ಹೋಗಿತ್ತು. ವಾರದಿಂದ ಮಳೆಯಾಗಿದ್ದು, ಸೇತುವೆ ಮತ್ತು ರಸ್ತೆ ನಡುವೆ ಒಂದು ಅಡಿಯಷ್ಟು ಕಂದಕ ಏರ್ಪಟ್ಟಿದೆ. ಬೈಕ್ ಸವಾರರಿಗೆ ಇದು ಗೊತ್ತಾಗದೇ, ಉರುಳಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಸಣ್ಣ ಕಾರುಗಳನ್ನು ಹತ್ತಿಸಲು, ಇಳಿಸಲು ಹರಸಾಹಸ ಪಡುತ್ತಿದ್ದಾರೆ.

ADVERTISEMENT

ಮಳೆಯ ನೀರು ಚರಂಡಿಗೆ ಹರಿಯದೇ, ರಸ್ತೆಯಲ್ಲಿ ಹರಿದು ಸೇತುವೆ ಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆ ಬಳಿ ಡಾಂಬರ್ ಹಾಕಿಸಿ, ಮಳೆಯ ನೀರು ಚರಂಡಿಗೆ ಹರಿಯುವಂತೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಮಳೆ ಬಂದರೆ ಸೇತುವೆ ಮೇಲೆ ನೀರು ನಿಲ್ಲುತ್ತದೆ. ಕೆಸರು ಗದ್ದೆಯಾಗುತ್ತದೆ. ಪಾದಚಾರಿಗಳು ತಿರುಗಾಡಲು ಆಗುತ್ತಿಲ್ಲ. ಮಳೆಯ ನೀರು ಮನೆಗಳಿಗೆ ನುಗ್ಗುತ್ತಿದೆ’ ಎಂದು ಹಿರೀಸಾವೆ ನಿವಾಸಿ ಅಣ್ಣಯ್ಯಣ್ಣ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಂಜಣ್ಣಗೌಡ, ‘ಡಾಂಬರ್ ಹಾಕಲು ಸಿದ್ದತೆ ಮಾಡಲಾಗಿತ್ತು. ಆದರೆ ಮಳೆಯಿಂದ ಹಾಕಲಾಗಿಲ್ಲ. ಮಳೆ ನಿಂತ ತಕ್ಷಣ ಸಿಮೆಂಟ್ ಮತ್ತು ಡಾಂಬರ್‌ ಹಾಕಲಾಗುವುದು’ ಎಂದು ತಿಳಿಸಿದ್ದಾರೆ.

ಹಿರೀಸಾವೆಯ ಡಿಸಿಸಿ ಬ್ಯಾಂಕ್ ಬಳಿ ರಸ್ತೆಯ ಸೇತುವೆ ಬಳಿ ಮಣ್ಣು ಜಲ್ಲಿ ಕೊಚ್ಚಿ ಹೋಗಿದೆ 
ಸೇತುವೆ ರಸ್ತೆ ನಡುವೆ ಕಂದಕ ಉಂಟಾಗಿ ಬೈಕ್ ಚಲಾಯಿಸಲು ಕಷ್ಟಪಡಬೇಕಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ
ರವಿಕುಮಾರ್ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.