
ಆಲೂರು: ಒಂದು ಕಾಲದಲ್ಲಿ ಅಧಿಕ ಮಳೆಯಾದರೆ ಗ್ರಾಮೀಣ ಪ್ರದೇಶದಲ್ಲಿರುವ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳು ತುಂಬಿ ಕೋಡಿ ಬೀಳುತ್ತಿದ್ದವು. ಹಳ್ಳಿಗಳ ರಸ್ತೆಗಳು ಸಾಮಾನ್ಯವಾಗಿ ಮಣ್ಣಿನ ರಸ್ತೆಗಳಾಗಿದ್ದರಿಂದ ರಸ್ತೆಗಳ ಮೇಲೆ ನೀರು ಹರಿದು ರಸ್ತೆ ಕೊರಕಲಾಗಿ, ತಿರುಗಾಡಲು ತೊಂದರೆ ಆಗುತ್ತಿತ್ತು. ಇತ್ತೀಚೆಗೆ 8-9 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 75 ಅನ್ನು ಚತುಷ್ಪಥ ರಸ್ತೆಯನ್ನಾಗಿ ಪರಿವರ್ತನೆ ಮಾಡುವ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಇದೀಗ ಹೆದ್ದಾರಿಯಲ್ಲಿಯೇ ನೀರು ನಿಲ್ಲುತ್ತಿದೆ.
ರಾಷ್ಟ್ರೀಯ ಹೆದ್ದಾರಿಯ ಕೆಲವು ತಿರುವು ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದು, ಮಳೆಗಾಲದಲ್ಲಿ ರಸ್ತೆ ಮೇಲೆ ಮತ್ತು ಅಕ್ಕಪಕ್ಕದಿಂದ ಹರಿದು ಬರುವ ನೀರು ಇಳಿಜಾರು ರಸ್ತೆಗಳಲ್ಲಿ ನಿಲ್ಲುತ್ತಿದೆ. ಇದರಿಂದ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ.
ಕೆಲ ತಿಂಗಳ ಹಿಂದೆ ಸಕಲೇಶಪುರ ಬಳಿ ಮಳೆಯಾದ ಸಂದರ್ಭದಲ್ಲಿ ರಸ್ತೆಯಲ್ಲಿ ಆಳವಾಗಿ ನೀರು ನಿಂತಿತ್ತು. ಕಾರೊಂದು ಹಾಯ್ದು ಮುಂದೆ ಹೋಗುವಾಗ ನೀರು ಚಿಮ್ಮಿತು. ಈ ಸಂದರ್ಭದಲ್ಲಿ ಹಿಂದೆ ಬರುತ್ತಿದ್ದ ಕಾರು ಚಾಲಕನಿಗೆ, ಮುಂದೆ ನಿಂತಿದ್ದ ಕಾರು ಗೋಚರಿಸದೇ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದರು.
ಆಲೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮಾವನೂರು ಕೆರೆ ಬಳಿ ಇರುವ ತಿರುವು ರಸ್ತೆ, ಸಿಂಗಾಪುರ ಸೇತುವೆ ಬಳಿ ಮತ್ತು ಈಶ್ವರಹಳ್ಳಿ ತಿರುವು ರಸ್ತೆಯಲ್ಲಿ ಭಾರಿ ನೀರು ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿ ಇಂತಹ ಘಟನೆಗಳು ನಡೆದರೂ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಜನರು ದೂರುತ್ತಿದ್ದಾರೆ.
ಸೋಮವಾರ ರಾತ್ರಿ ಸುಮಾರು 3-4 ಇಂಚು ಮಳೆಯಾಗಿದ್ದು, ಈಶ್ವರಹಳ್ಳಿ ಕೂಡಿಗೆ ರಸ್ತೆಯಲ್ಲಿ ಭಾರಿ ನೀರು ಸಂಗ್ರಹವಾಗಿ ವಾಹನಗಳ ಓಡಾಟಕ್ಕೆ ಅಡಚಣೆಯಾಯಿತು. ಬೆಳಗಾಗುವವರೆಗೂ ಚಾಲಕರು ಜಾಗ್ರತೆಯಿಂದ ವಾಹನಗಳನ್ನು ಚಲಾಯಿಸಿದ್ದರಿಂದ ಅಪಘಾತಗಳು ಸಂಭವಿಸಲಿಲ್ಲ.
ಮಾಹಿತಿ ಪಡೆದು ಸ್ಥಳಕ್ಕೆ ಬಂದ ಶಾಸಕ ಸಿಮೆಂಟ್ ಮಂಜು, ಸ್ಥಳದಿಂದಲೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ವಿಡಿಯೋ ಕರೆ ಮಾಡಿ, ಕೂಡಲೇ ನೀರು ತೆರವುಗೊಳಿಸಲು ಸೂಚನೆ ನೀಡಿದರು.
‘ಹರಾಳಕೊಪ್ಪಲು ಮತ್ತು ಸಿಂಗೋಡನಹಳ್ಳಿಯಿಂದ ಅಬ್ಬನ ಗ್ರಾಮಕ್ಕೆ ಹರಿಯುವ ಚಕ್ರತೀರ್ಥ ನದಿ ಹರಿಯುವ ಸ್ಥಳ ಇದಾಗಿದೆ. ರಾತ್ರಿ ಅತಿ ಮಳೆ ಆಗಿರುವುದರಿಂದ ಹೆದ್ದಾರಿ ಮೇಲೆ ನೀರು ನಿಂತಿದೆ. ತುರ್ತಾಗಿ ದುರಸ್ತಿ ಮಾಡದಿದ್ದರೆ ಓಡಾಡಲು ತೊಂದರೆಯಾಗುತ್ತದೆ. ಯಾವುದೇ ಅನುದಾನವಿಲ್ಲದಿದ್ದರೂ ಸ್ಥಳೀಯರ ಸಹಕಾರದಿಂದ ಜೆಸಿಬಿ ಯಂತ್ರ ಬಳಸಿ ಅಧಿಕಾರಿಗಳ ಸಹಕಾರದಿಂದ ದುರಸ್ತಿ ಕೆಲಸ ಮಾಡಿಸಿದ್ದೇನೆ. ಸ್ಥಳೀಯರ ಸಹಕಾರಕ್ಕೆ ಅಭಿನಂದಿಸುತ್ತೇನೆ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ರಾಷ್ಟೀಯ ಹೆದ್ದಾರಿಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಶಾಸಕರು ನೀಡಿರುವ ಸೂಚನೆಗಳನ್ವಯ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವೆಡೆ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಸೈಯ್ಯದ್ ತಿಳಿಸಿದ್ದಾರೆ.
ಮಳೆ ಹೆಚ್ಚಾಗಿದ್ದು ಸೇತುವೆ ರಸ್ತೆಗಳು ಹಾಳಾಗುತ್ತಿವೆ. ಪ್ರಕೃತಿ ವಿಕೋಪದಡಿ ಹಣ ಬಿಡುಗಡೆ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಈಶ್ವರಹಳ್ಳಿ ಕೂಡಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೈಮಾಸ್ಟ್ ದೀಪ ಅಳವಡಿಸಲು ಸೂಚಿಸಿದ್ದೇನೆಸಿಮೆಂಟ್ ಮಂಜು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.