ADVERTISEMENT

ಯುಗಾದಿ ಸಂಭ್ರಮಕ್ಕೆ ರಾಮೋತ್ಸವ ಮೆರುಗು

ಜಿ.ಚಂದ್ರಶೇಖರ್‌
Published 2 ಏಪ್ರಿಲ್ 2022, 2:35 IST
Last Updated 2 ಏಪ್ರಿಲ್ 2022, 2:35 IST
ಅರಕಲಗೂಡು ಕೋಟೆ ಕೋದಂಡ ರಾಮದೇವಾಲಯದ ಮೂಲ ವಿಗ್ರಹಗಳಿಗೆ ಅರಿಸಿನ ಅಲಂಕಾರ ಮಾಡಿರುವುದು
ಅರಕಲಗೂಡು ಕೋಟೆ ಕೋದಂಡ ರಾಮದೇವಾಲಯದ ಮೂಲ ವಿಗ್ರಹಗಳಿಗೆ ಅರಿಸಿನ ಅಲಂಕಾರ ಮಾಡಿರುವುದು   

ಅರಕಲಗೂಡು: ಪಟ್ಟಣದಲ್ಲಿ ಯುಗಾದಿ ಹಬ್ಬದ ದಿನವೇ ರಾಮನವಮಿ ಕಾರ್ಯ ಕ್ರಮಗಳು ಚಾಲನೆಗೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ರಾಮೋತ್ಸವ ಮೆರುಗು ನೀಡುತ್ತದೆ.

ಕೋಟೆ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಸಂಜೆ ಪಂಚಾಂಗ ಶ್ರವಣ, ಪೂಜೆ, ಪಾನಕ ಪನಿವಾರಗಳ ವಿತರಣೆ ನಡೆಯುತ್ತದೆ. ಪಟ್ಟಣದ ಕೋಟೆ ಕೋದಂಡ ರಾಮ ದೇವಾಲಯದಲ್ಲಿ ಯುಗಾದಿ ದಿನದಿಂದ ರಾಮೋತ್ಸವ ಕಾರ್ಯಕ್ರಮಗಳು ಚಾಲನೆ ಗೊಳ್ಳುತ್ತವೆ. ಇದು ಹಬ್ಬದ ಸಡಗರ ಹೆಚ್ಚಿಸಿದೆ.

ರಾಮನವಮಿಯಂದು ರಥೋತ್ಸವ ಹಾಗೂ ದಶಮಿಯಂದು ಶ್ರೀರಾಮ ಪಟ್ಟಾಭಿಷೇಕ ನಡೆಯುತ್ತದೆ. ಇದರ ಹಿನ್ನೆಲೆಯಲ್ಲಿ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಗೊಳ್ಳುತ್ತವೆ. ಹೊರ ಊರುಗಳಲ್ಲಿ ನೆಲೆಸಿರುವ ಇಲ್ಲಿನವರು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.

ADVERTISEMENT

ಹಬ್ಬದ ದಿನದಂದು ಬೆಳಿಗ್ಗೆ ಮನೆಗಳಿಗೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿ, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆ ಸಲ್ಲಿಸಿ, ಬೇವು, ಬೆಲ್ಲ ಸವಿಯುವುದು ವಾಡಿಕೆ.

ಮಧ್ಯಾಹ್ನ ನೆಂಟರಿಷ್ಟರೊಡಗೂಡಿ ಹೋಳಿಗೆ ಊಟ ಮಾಡಿ ಸಂಜೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪಂಚಾಂಗ ಶ್ರವಣ ಆಲಿಸಿ ಮಳೆ, ಬೆಳೆ, ವರ್ಷದ ಭವಿಷ್ಯ ತಿಳಿಯುವ ಮೂಲಕ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ.

ಕೃಷಿಕರು ತಮ್ಮ ಜಮೀನುಗಳಿಗೆ ತೆರಳಿ ಎತ್ತು, ನೊಗ ನೇಗಿಲುಗಳಿಗೆ ಪೂಜೆ ಸಲ್ಲಿಸಿ ಹೊನ್ನಾರು ಕಟ್ಟಿ ಭೂಮಿಯನ್ನು ಉಳುಮೆ ಮಾಡುವ ಮೂಲಕ ಬರಲಿರುವ ಕೃಷಿ ವರ್ಷದಲ್ಲಿ ಉತ್ತಮ ಮಳೆ, ಬೆಳೆಯಾಗಿ ಬದುಕು ಹಸನಾ ಗಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.

ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ ಸೇರಿದಂತೆ ವಿವಿಧದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.