
ಆಲೂರು: ಮಠ ಮಾನ್ಯಗಳು ಮಕ್ಕಳಿಗೆ ವಿದ್ಯಾದಾನ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುತ್ತವೆ ಎಂದು ಸುತ್ತೂರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ಪಾಳ್ಯ ಹೋಬಳಿ ಸಂಕ್ಲಾಪುರದ ಶ್ರೀ ಶಾಂತಮಲ್ಲೇಶ್ವರಸ್ವಾಮಿ ಮಠದಲ್ಲಿ ಏರ್ಪಡಿಸಿದ್ದ ನಿರಂಜನ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ತ್ರಿವಿಧ ದಾಸೋಹದ ಮೂಲಕ ನಾಡಿನ ಮಠ ಮಾನ್ಯಗಳು ಸದೃಢ ಸಮಾಜ ನಿರ್ಮಾಣಕ್ಕೆ ಅತ್ಯಮೂಲ್ಯ ಕೊಡುಗೆ ನೀಡಬೇಕು. ಭಕ್ತರು ಹಾಗೂ ಮಠಗಳ ಬಾಂಧವ್ಯ ಅತ್ಯಮೂಲ್ಯವಾದುದು. ಜನಸಾಮಾನ್ಯರಿಗೆ ಸಂಸ್ಕಾರ ಕಲಿಸುವ ಕೆಲಸವನ್ನು ಧರ್ಮ ಗುರುಗಳು ಹಾಗೂ ಮಠಗಳು ಮಾಡುತ್ತವೆ. ಸಮಾಜದಲ್ಲಿ ಯಾವಾಗಲೂ ಶಾಂತಿ, ಸಹಬಾಳ್ವೆ, ಪರಸ್ಪರ ಸಹಕಾರ ಮನೋಭಾವ ಮೂಡಬೇಕೆನ್ನುವುದು ಶ್ರದ್ಧಾ ಕೇಂದ್ರಗಳ ಆಶಯವಾಗಿರುತ್ತದೆ. ಭಕ್ತಾದಿಗಳಿಂದ ಮಠ ಮಾನ್ಯಗಳು ಬೆಳೆಯುತ್ತವೆ. ವ್ಯಕ್ತಿ ಸಂಸ್ಕಾರವಂತನಾಗಬೇಕಾದರೆ ಕಲಿಕೆ ಇರಬೇಕು. ಅದು ಮನೆಯಿಂದಲೆ ಆಗಬೇಕು. ನಂತರ ವಿದ್ಯೆ ಕಲಿಸುವ ಗುರಿ ಆ ದಾರಿಯಲ್ಲಿ ಕರೆದೊಯ್ಯುತ್ತಾನೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಂತಹ ಕೆಲಸವನ್ನು ಮಾಡುತ್ತಿವೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಮಾನವೀಯ ಮೌಲ್ಯ, ಕರುಣೆ, ಸಹಕಾರ ಮನೋಭಾವ ಇದೆಯೆಂದರೆ, ಅದಕ್ಕೆ ಭಾರತೀಯ ಧಾರ್ಮಿಕ ಪರಂಪರೆಯೆ ಕಾರಣವೆಂದರು.
ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಂಕಲಾಪುರ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಿದ್ದು ಮಠದ ಭಕ್ತರು. ಶಿಕ್ಷಣದ ಮೂಲಕ ಜ್ಞಾನ, ಸಂಸ್ಕಾರ ಪಡೆಯಬೇಕು. ಸದ್ಭಕ್ತಿ, ಭಾತೃತ್ವ ಎಲ್ಲರಲ್ಲೂ ಬೆಳೆಯಬೇಕು. ಸಂಕ್ಲಾಪುರ ಮಠ 700 ವರ್ಷಗಳ ಇತಿಹಾಸ ಹೊಂದಿದೆ. ಕರ್ನಾಟಕದಲ್ಲಿ ಮಠ ಮಾನ್ಯಗಳ ಸೇವೆ ಅಪೂರ್ವವಾದುದು. ಶಿಕ್ಷಣ ಸಂಸ್ಕೃತಿ, ಸಂಸ್ಕಾರ, ದಾಸೋಹವು ಮಹತ್ತರ ಸೇವಾ ಕಾರ್ಯವಾಗಿದೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಠದ ಬಗ್ಗೆ ನನಗೆ ಅತೀವ ಗೌರವವಿದೆ. ಸುತ್ತೂರು ಹಾಗೂ ಸಿದ್ದಗಂಗಾ ಸ್ವಾಮೀಜಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದು ಭಾವಿಸುತ್ತೇನೆ. ಮಠದ ಅಭಿವೃದ್ಧಿಗೆ ಕೈಲಾದ ನೆರವು ನೀಡುತ್ತೇನೆ ಎಂದರು.
ಮಾಜಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಶ್ರೀ ಮಠದ ಶಾಲೆಗೆ ಸಹಾಯ ಮಾಡುತ್ತೇನೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ₹1 ಲಕ್ಷ ದೇಣಿಗೆ ನೀಡುತ್ತೇನೆಂದು ಭರವಸೆ ನೀಡಿದರು.
ಶಾಸಕ ಸಿಮೆಂಟ್ ಮಂಜು ಶ್ರೀ ಮಠದ ದ್ವಾರ ಬಾಗಿಲು ಉದ್ಘಾಟನೆ ಮಾಡಿದರು. ಕನಕಪುರ ದೇಗುಲ ಮಠದ ಡಾ. ಚನ್ನಬಸವ ಸ್ವಾಮೀಜಿ, ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಸಂಕಲಾಪುರ-ಕಲ್ಲುಮಠದ ಧರ್ಮರಾಜೇಂದ್ರ ಸ್ವಾಮೀಜಿ, ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಲ್ಲಾ ಪಂಚಾಯಿತಿ ನಿವೃತ್ತ ಸಿಇಒ ಎಂ.ಡಿ. ಕಾಂತರಾಜು, ಬಿ. ರೇಣುಕಾ ಪ್ರಸಾದ್, ಮಠದ ಅಧ್ಯಕ್ಷ ಎಂ.ಜೆ. ಬಸವಣ್ಣ, ಕಾರ್ಯದರ್ಶಿ ಮಹೇಶ್ ಚಿಕ್ಕೋಟೆ, ಖಜಾಂಚಿ ಕಾಂತರಾಜು, ಸಾಹಿತಿ ಶಿಕ್ಷಕ ಪರಮೇಶ್ ಮಡಬಲು, ಝಾನ್ಸಿ ವಿದ್ಯಾ ಸಂಸ್ಥೆ ಮುಖ್ಯ ಶಿಕ್ಷಕ ಹರೀಶ್, ಆಡಳಿತ ಮಂಡಳಿ ಸದಸ್ಯರು, ಸಮಾಜದ ಬಾಂಧವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.