ADVERTISEMENT

ದೂರು ಸ್ವೀಕರಿಸಲು ಹಿಂದೇಟು: ನಾಲ್ವರ ಅಮಾನತು

ರೈಲ್ವೆ ಟೆಕ್ನಿಷಿಯನ್ ಮೇಲಿನ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 15:47 IST
Last Updated 27 ಜನವರಿ 2021, 15:47 IST

ಹಾಸನ: ರೈಲ್ವೆ ಟೆಕ್ನಿಷಿಯನ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲು ಅಲೆದಾಡಿಸಿದ
ಮುಖ್ಯ ಕಾನ್‌ಸ್ಟೆಬಲ್ ಸೇರಿದಂತೆ ನಗರ ಠಾಣೆ ಹಾಗೂ ಬಡಾವಣೆ ಠಾಣೆಯ ತಲಾ ಇಬ್ಬರು ಸಿಬ್ಬಂದಿಯನ್ನು
ಪೊಲೀಸ್‌ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅಮಾನತು ಮಾಡಿದ್ದಾರೆ.

ಅಲ್ಲದೇ ನಗರ ಮತ್ತು ಬಡಾವಣೆ ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ ವಿರುದ್ಧ ರೂಲ್-7 ಅಡಿಯಲ್ಲಿ
ಇಲಾಖಾ ತನಿಖೆಗೆ ಆದೇಶ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ವಿಶ್ವೇಶ್ವರ ನಗರದ 1ನೇ ಕ್ರಾಸ್‍ನಲ್ಲಿ ವಾಸವಾಗಿದ್ದ, ಹಾಸನ ರೈಲ್ವೆ ಸ್ಟೇಷನ್‍ನಲ್ಲಿ ಟೆಕ್ನಿಷಿಯನ್ ಆಗಿದ್ದ
ಕೇರಳದ ಶಾಂತಿಭೂಷಣ್ ಎಂಬುವರು ಜ.20ರ ರಾತ್ರಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಎನ್‍ಟಿಪಿಸಿ ಪರೀಕ್ಷೆ
ಬರೆಯಲು ಮಂಗಳೂರಿಗೆ ತೆರಳ ಬೇಕಿತ್ತು. ಜ್ಞಾನಾಕ್ಷಿ ಕಲ್ಯಾಣ ಮಂಟಪದ ಹಿಂಭಾಗ ಹಾದು ಹೋಗಿರುವ
ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಮೂವರು ಬಂದು ಏಕಾಏಕಿ ದಾಳಿ ನಡೆಸಿ
ಚಾಕುವಿನಿಂದ ಶಾಂತಿಭೂಷಣ್ ಕೈಗೆ ಚುಚ್ಚಿ ₹10 ಸಾವಿರ ನಗದು, ಎಂ.ಐ ಮೊಬೈಲ್ ಫೋನ್, ಪಾನ್
ಕಾರ್ಡ್, ವೋಟರ್ ಐಡಿ, ರೈಲ್ವೆ ಪಾಸ್, ಎನ್‍ಟಿಸಿಪಿ ಹಾಲ್ ಟಿಕೆಟ್ ಇದ್ದ ಬ್ಯಾಗ್ ಕಿತ್ತು ಪರಾರಿಯಾಗಿದ್ದರು.

ADVERTISEMENT

ಘಟನೆ ನಡೆದ ಮಾರನೇ ದಿನ ಗಾಯದ ನಡುವೆಯೂ ದೂರು ನೀಡಲು ಬಂದ ಅವರಿಗೆ ಈ ಠಾಣೆಯಲ್ಲ, ಆ ಠಾಣೆ
ಎಂದು ನಗರ ಹಾಗೂ ಬಡಾವಣೆ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿ ಅಲೆದಾಡಿಸಿದ್ದರು.

ನಗರ ಠಾಣೆಗೆ ಹೋದಾಗ ಕೃತ್ಯ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಬೂಬು ಹೇಳಿ ಬಡಾವಣೆ
ಠಾಣೆಗೆ ಹೋಗುವಂತೆ ತಿಳಿಸಿದ್ದರು. ಅದರಂತೆ ನೊಂದ ವ್ಯಕ್ತಿ ಬಡಾವಣೆ ಠಾಣೆಗೆ ಹೋದಾಗ ಅಲ್ಲಿದ್ದ
ಪೊಲೀಸ್‌ ಕಾನ್‌ಸ್ಟೆಬಲ್‌ಗಳು ದೂರು ಸ್ವೀಕರಿಸಲು ಹಿಂದೇಟು ಹಾಕಿದ್ದರು. ಈ ವಿಷಯ ಕೇರಳ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೂ ಹೋಗಿತ್ತು ಎನ್ನಲಾಗಿದೆ.

ಇದಾದ ಬಳಿಕ ಶಾಂತಿಭೂಷಣ್‌ ನೇರವಾಗಿ ಪೊಲೀಸ್‌ ವರಿಷ್ಠಾಧಿಕಾರಿ ಬಳಿಗೆ ಹೋಗಿ ನಡೆದ ಘಟನೆಯನ್ನು ಎಳೆ ಎಳೆಯಾಗಿ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.