ADVERTISEMENT

ಹಾಸನದಲ್ಲಿ ಆಮ್ಲಜನಕ ಸಿಗದೆ ಇಬ್ಬರ ಸಾವು: ಎಚ್‌.ಡಿ. ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮೇ 2021, 11:58 IST
Last Updated 7 ಮೇ 2021, 11:58 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ಕೊರೊನಾ ಸೋಂಕಿತರಿಗೆ ನೀಡುವ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದರು.

ರಾಜಕೀಯ ಮುಖಂಡರ ಸಹಕಾರದೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ ಇಂಜೆಕ್ಷ್‌ನ್‌ ₹ 18 ರಿಂದ ₹ 20 ಸಾವಿರವರೆಗೂ ಮಾರಾಟ ಮಾಡಲಾಗುತ್ತಿದೆ. ಇದರಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆ ನಡೆಸಿ, ಪತ್ತೆ ಮಾಡಬೇಕು. ರೆಮ್‌ಡಿಸಿವಿರ್‌ಚುಚ್ಚುಮದ್ದು ರೋಗಿಗೆ ತಲುಪಿದೆಯೇ ಎಂಬುದನ್ನು ಪರಿಶೀಲಿಸಬೇಕು. ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಸ್ತುತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿ ಒಂದು ಸಾವಿರ ರೆಮ್‌ಡಿಸಿವಿರ್ ವಯಲ್‌ ಅಗತ್ಯವಿದೆ. ಆದರೆ ಪೂರೈಕೆಆಗುತ್ತಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆಮ್ಲಜನಕ ಅಭಾವ ಉಂಟಾಗಿದೆ. ಏಳು ಸರ್ಕಾರಿ ಆಸ್ಪತ್ರೆ ಸೇರಿದಂತೆ 22 ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ 672 ಆಮ್ಲಜನಕ ಸಿಲಿಂಡರ್ ಅಗತ್ಯವಿದೆ. ಹಾಸನದಲ್ಲಿ ಒಂದೇ ಒಂದು ಆಮ್ಲಜನಕ ಉತ್ಪಾದನಾ ಘಟಕ ಇದ್ದು, 460 ಸಿಲಿಂಡರ್‌ ಭರ್ತಿ ಮಾಡುವ ಸಾಮರ್ಥ್ಯ ಇದೆ. ಅಂದಾಜು 200 ಸಿಲಿಂಡರ್‌ ಕೊರತೆ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗುರುವಾರ ಆಮ್ಲಜನಕ ಕೊರತೆಯಿಂದ ಸಂಜೀವಿನಿ ಆಸ್ಪತ್ರೆಯಲ್ಲಿ ಬೇಲೂರಿನ ಬೋರೇಗೌಡ, ಆಲೂರಿನ ಸಂತೋಷ್ ಎಂಬುವರು ಮೃತಪಟ್ಟಿದ್ದಾರೆ. ಆದರೆ ವೈದ್ಯರು ಸೋಂಕು ಉಲ್ಬಣಗೊಂಡು ಸಾವಿಗೀಡಾಗಿದ್ದಾರೆಂಬ ಕಾರಣ ನೀಡುತ್ತಾರೆ ಎಂದು ಹೇಳಿದರು.

ADVERTISEMENT

ಕೋವಿಡ್‌ ಶುರುವಾಗಿ ಒಂದು ವರ್ಷವಾದರೂ ಆಮ್ಲಜನಕ ಘಟಕ ಸ್ಥಾಪಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಚುನಾವಣೆಯೇ ಮುಖ್ಯವಾಯಿತು ಹೊರತು ಜನರ ಪ್ರಾಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬಡವರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಇಲ್ಲವಾದರೆ ಶವವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ತಂದಿಡುತ್ತೇವೆ. ಜಿಲ್ಲಾಡಳಿತವೇ ಅಂತ್ಯ ಸಂಸ್ಕಾರ ನೆರವೇರಿಸಲಿ ಎಂದರು.

ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಗುತ್ತಿಗೆ ಪಡೆದಿಲ್ಲ. ಕೇವಲ ಮತಕ್ಕಾಗಿ ಅವರ ಪರವಾಗಿ ಮಾತನಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಇಲ್ಲ. ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ನೀಡಿದರು. ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ 26 ಸಂಸದರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅವರಿಗೆ ತಾಕತ್ತು ಇಲ್ಲ. ಮೋದಿ ಹೇಳಿದಾಗ ನಿಂತುಕೊಳ್ಳುತ್ತಾರೆ, ಕುಳಿತುಕೊಳ್ಳುತ್ತಾರೆ. ರಾಜ್ಯದ ಜನತೆ ಅವರನ್ನು ಆಯ್ಕೆ ಮಾಡಿರುವುದು ಸಾರ್ಥಕವಾಯಿತು ಎಂದು ವ್ಯಂಗ್ಯವಾಡಿದರು.

ಸರ್ಕಾರ ಲಾಕ್‌ಡೌನ್‌ ಮಾಡಲು ನಿರ್ಧರಿಸಿದೆ. ಆದರೆ ಬೀದಿ ಬದಿ ವ್ಯಾಪಾರಿಗಳು, ಹೂವು ಮಾರಾಟಗಾರರು, ಕಾರ್ಮಿಕರು ಜೀವನ ನಡೆಸುವುದು ಹೇಗೆ. 5 ಕೆ.ಜಿ ಅಕ್ಕಿ, 3 ಕೆ.ಜಿ. ಗೋಧಿ ಅಥವಾ ರಾಗಿ, ₹ 3 ಸಾವಿರ ಸಹಾಯಧನ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.