ADVERTISEMENT

ಮಹಿಳಾ ಹೋರಾಟಗಾರರ ತ್ಯಾಗ ಸ್ಮರಿಸಿ

ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಂಚನಮಾಲಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:08 IST
Last Updated 20 ಸೆಪ್ಟೆಂಬರ್ 2025, 4:08 IST
ಹಾಸನದ ಸಂತ ಜೋಸೆಫರ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಎಚ್‌.ಜಿ. ಕಾಂಚನಮಾಲಾ ಉದ್ಘಾಟಿಸಿದರು
ಹಾಸನದ ಸಂತ ಜೋಸೆಫರ ಕಾಲೇಜಿನಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಎಚ್‌.ಜಿ. ಕಾಂಚನಮಾಲಾ ಉದ್ಘಾಟಿಸಿದರು   

ಹಾಸನ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕ ಮಹಿಳೆಯರು ಸಮರ್ಪಣಾ ಭಾವದಿಂದ ಪಾಲ್ಗೊಂಡಿದ್ದು, ಅವರ ತ್ಯಾಗವನ್ನು ಭಾರತದ ಇಂದಿನ ಪೀಳಿಗೆ ಸದಾ ಸ್ಮರಿಸಬೇಕು ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಜಿಲ್ಲಾ ಸಮಿತಿ ನಿಕಟಪೂರ್ವ ಜಂಟಿ ಕಾರ್ಯದರ್ಶಿ ಎಚ್.ಜಿ. ಕಾಂಚನಮಾಲಾ ಹೇಳಿದರು.

ನಗರದ ಬಿ ಕಾಟೀಹಳ್ಳಿಯ ಸಂತ ಜೋಸೆಫರ ಕಾಲೇಜಿನ ಪೋಪ್ ಫ್ರಾನ್ಸಿಸ್ ಹಾಲ್‌ನಲ್ಲಿ ಕನ್ನಡ ಸಂಘ ಹಾಗೂ ಐ.ಕ್ಯೂ.ಎ.ಸಿ. ವಿಭಾಗದಿಂದ ಆಯೋಜಿಸಿದ್ದ ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕದೇವಿ, ಅಹಲ್ಯಾಬಾಯಿ ಹೋಳ್ಕರ್ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅನೇಕ ಸಂಸ್ಥಾನದ ರಾಣಿಯರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಪೋರ್ಚುಗೀಸರ ಮತ್ತು ಬ್ರಿಟಿಷರ ದಾಳಿಗಳಿಗೆ ತಮ್ಮ ಪ್ರಾಣ ಕೊಟ್ಟಿದ್ದಾರೆ. ಆ ಮೂಲಕ ದೇಶದ ಸ್ವಾಭಿಮಾನದ ಸ್ವಾತಂತ್ರ್ಯ ಹೋರಾಟಕ್ಕೆ ಬುನಾದಿ ಹಾಡಿದ್ದಾರೆ ಎಂದರು.

ಇಂದಿನ ಎಲ್ಲ ಮಹಿಳೆಯರಿಗೆ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳು ಸಮಾನವಾಗಿ ಹಂಚಿಕೆ ಆಗಬೇಕಾಗಿದೆ. ಮಹಿಳಾ ಶೋಷಣೆ ನಿಲ್ಲಬೇಕು. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಿ, ಅಧಿಕಾರ ಪಡೆದು, ದೇಶದ ಸಂಸ್ಕೃತಿ ಮತ್ತು ಸಂಪತ್ತು ರಕ್ಷಿಸಬೇಕು. ಇದಕ್ಕಾಗಿ ಅನೇಕ ರಾಣಿಯರ ಸ್ವಾತಂತ್ರ್ಯ ಹೋರಾಟದ ಇತಿಹಾಸ ತಿಳಿಸಬೇಕಾಗಿದೆ ಎಂದರು.

ಕ್ಯಾಂಪಸ್ ಆನಿಮೇಟರ್ ರೆ.ಫಾ. ಓಲ್ವಿನ್ ವೆಗಾಸ್ ಮಾತನಾಡಿ, ಕನ್ನಡದ ಮೊದಲ ಅಕ್ಷರ ಅ. ಅದರಂತೆ ಎಲ್ಲರಿಗೂ ಅಮ್ಮ, ಅನ್ನ, ಆಹಾರಗಳು ಮೂಲಭೂತ ಅವಶ್ಯಕತೆಯಾಗಿದೆ. ಸಂಸ್ಕೃತಿ, ಸಂಸ್ಕಾರ ಮಹಿಳೆಯರಿದಲೇ ಬರುತ್ತದೆ. ರಾಣಿ ಅಬ್ಬಕ್ಕ ದೇವಿ, ರಾಣಿ ಚನ್ನಮ್ಮನವರು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮ್ಯಾಕ್ಸಿಮ್ ಡಯಾಸ್ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಿ.ಬಿ.ರಂಗೇಗೌಡ ಆಶಯ ಭಾಷಣ ಮಾಡಿದರು. ಉಪ ಪ್ರಾಂಶುಪಾಲ ಪ್ರದೀಪ್ ಕುಮಾರ್, ಕಾಲೇಜಿನ ಹಣಕಾಸು ಅಧಿಕಾರಿ ರೆ.ಫಾ. ರೆಯಾನ್ ಪೆರೇರಾ, ಮಹಿಳಾ ಸಲಹಾ ಸಮಿತಿ ಸಂಚಾಲಕಿ ವೆರೋನಿಕಾ, ಐಕ್ಯೂಎಸಿ ಸಂಚಾಲಕಿ ವೀಣಾ, ಉಪನ್ಯಾಸಕ ಮೋಹನ್ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿ ಖುಷಿ, ಕಿತ್ತೂರು ರಾಣಿ ಚನ್ನಮ್ಮಳಾಗಿ, ಕೃತಿಕಾ ಸಿ.ಡಿ., ರಾಣಿ ಅಬ್ಬಕ್ಕದೇವಿಯಾಗಿ, ಝಹಾ, ಅಹಲ್ಯಾಬಾಯಿ ಹೋಳ್ಕರ್ ವೇಷಧಾರಿಗಳಾಗಿ ಕಂಗೊಳಿಸಿದರು. ಎನ್‌ಎಸ್ಎಸ್ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ಕನ್ನಡ ಸಂಘದ ಕಾರ್ಯದರ್ಶಿ ಕಾವ್ಯ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಚರಣ್ ವಂದಿಸಿದರು. ಗಾನವಿ ನಿರೂಪಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.