ADVERTISEMENT

ಹೇಮಾವತಿ ಜಲಾಶಯ ಪರಿಹಾರ ಅಕ್ರಮ: ಮೂರು ತಿಂಗಳಲ್ಲಿ ವರದಿ ಸಲ್ಲಿಕೆ

ಎಚ್ಆರ್‌ಪಿ: ಸಂತ್ರಸ್ತರು, ದೂರುದಾರರಿಂದ ಮಾಹಿತಿ ಪಡೆದ ತನಿಖಾಧಿಕಾರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 14:37 IST
Last Updated 26 ಫೆಬ್ರುವರಿ 2020, 14:37 IST
ಹೇಮಾವತಿ ಜಲಾಶಯ
ಹೇಮಾವತಿ ಜಲಾಶಯ    

ಹಾಸನ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ಆಗಿರುವ ಕಂದಾಯ ಇಲಾಖೆಯ (ಪುನರ್ವಸತಿ ಮತ್ತು ಪುನರ್‌ನಿರ್ಮಾಣ) ಆಯುಕ್ತ ಮನೋಜ್‌ ಜೈನ್‌ ಅವರು ದೂರುದಾರರಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಸಂತ್ರಸ್ತರು, ದೂರುದಾರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಂತ್ರಸ್ತ ಮರಿಜೋಸೆಫ್‌ ಮಾತನಾಡಿ, ‘ಎಚ್‌ಆರ್‌ಪಿಗಾಗಿ ಮೀಸಲಿಟ್ಟಿದ್ದ 85 ಸಾವಿರ ಎಕರೆ ಪೈಕಿ 25 ಸಾವಿರ ಎಕರೆ ಸಂತ್ರಸ್ತರಿಗೆ ನೀಡಲಾಗಿದೆ ಎಂದು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದರು. ಉಳಿದ ಜಮೀನಿನ ಬಗ್ಗೆ ಮಾಹಿತಿ ಇಲ್ಲ. ನೈಜ ಸಂತ್ರಸ್ತರಿಗೆ ಬದಲಿ ಭೂಮಿ ಸಿಗುತ್ತಿಲ್ಲ. ನಕಲಿ ಸರ್ಟಿಫಿಕೇಟ್‌ ಪಡೆದವರು ಭೂಮಿ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಗಾಗಿ 1978ರಲ್ಲಿ ಎರಡು ಎಕರೆ ಜಮೀನು ಕಳೆದುಕೊಂಡಿದ್ದೇನೆ. ಬದಲಿ ಭೂಮಿಗಾಗಿ 20016ರಲ್ಲಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಮಂಜೂರು ಮಾಡಿಲ್ಲ’ ಎಂದು ಅಳಲು ತೋಡಿಕೊಂಡರು.

ADVERTISEMENT

‘ಹಾಸನ ಉಪವಿಭಾಗಾಧಿಕಾರಿಯಾಗಿದ್ದ ಎಚ್‌.ಎಲ್.ನಾಗರಾಜ್‌ ಅವರು ಅಕ್ರಮದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಜಿಲ್ಲಾಡಳಿತ 414 ಜನರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿದೆ. ಉದಾಹರಣೆಗೆ ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದಲ್ಲಿ ಸರ್ವೆ ನಂ. 151ರಲ್ಲಿ ಎಂಟು ಎಕರೆ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಿ ಸಂತ್ರಸ್ತರಿಗೆ ಕೊಡುವುದು ಯಾವಾಗ’ ಎಂದು ಪ್ರಶ್ನಿಸಿದರು.

ದಲಿತ ಮುಖಂಡರಾದ ಸಂದೇಶ್‌, ನಾರಾಯಣ ದಾಸ್‌, ಈರಪ್ಪ ಮಾತನಾಡಿ, ‘ಒಂದು ಎಕರೆಗೆ ಕನಿಷ್ಠ ₹ 10 ಲಕ್ಷ ದರ ಇದೆ. ಒಬ್ಬ ವ್ಯಕ್ತಿಯೇ ಎರಡು, ಮೂರು ಬಾರಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಎಸ್ಟೇಟ್‌ ಭೂ ಮಾಲೀಕರು ಆಲೂರು ಮತ್ತು ಸಕಲೇಶಪುರ ತಾಲ್ಲೂಕಿನಲ್ಲಿ ಎಚ್‌ಆರ್‌ಪಿ ಜಮೀನು ಅಂದಾಜು 20 ಸಾವಿರ ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಸಾವಿರಾರು ಕೋಟಿ ರೂಪಾಯಿ ಹಗರಣವಾಗಿದ್ದು, ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು’ ಎಂದು ಕೋರಿದರು.

ಸಕಲೇಶಪುರ ತಾಲ್ಲೂಕಿನ ಸತ್ತಿಗಲ್‌ ನ ಸಂತ್ರಸ್ತ ಮಂಜುನಾಥ್‌, ‘ಎಚ್‌ಆರ್‌ಪಿಗಾಗಿ 7 ಎಕರೆ ಜಮೀನು ಹೋಗಿದೆ. ₹ 700 ರೂಪಾಯಿ ಪರಿಹಾರ ಸಹ ಪಡೆದುಕೊಳ್ಳಲಾಗಿದೆ. ಆದರೆ ಬದಲಿ ಜಮೀನು ಮಂಜೂರು ಮಾಡಿಲ್ಲ. ಮಾಹಿತಿ ಕೊರೆತೆಯಿಂದ ಸರ್ಟಿಫಿಕೇಟ್‌ ಪಡೆದುಕೊಳ್ಳಲು ಆಗಿಲ್ಲ. ಈಗ ಅಧಿಕಾರಿಗಳು ಸರ್ಟಿಫಿಕೇಟ್‌ ಕೊಡುತ್ತಿಲ್ಲ. ಏನು ಮಾಡಬೇಕು ತೋಚುತ್ತಿಲ್ಲ’ ಎಂದರು.

‘ಎಚ್‌ಆರ್‌ಪಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲಾಗಿದೆ’ ಎಂದು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ದ್ಯಾವೇಗೌಡ ಅವರು ತನಿಖಾಧಿಕಾರಿ ಗಮನಕ್ಕೆ ತಂದರು,.

‘ಎಚ್‌ಆರ್‌ಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಾಗುವುದು. ಅಕ್ರಮ ಭೂ ಮಂಜೂರಾತಿ, ಒತ್ತುವರಿ ಹಾಗೂ ಒಂದೇ ಪ್ರಮಾಣಪತ್ರಕ್ಕೆ ಎರಡು ಕಡೆ ಭೂಮಿ ಮಂಜೂರು ಮಾಡಿರುವ ಬಗ್ಗೆ ದಾಖಲಾತಿಗಳು ಇದ್ದರೆ ತಕ್ಷಣ ತಮಗೆ ದೂರು ನೀಡಬಹುದು. ಈ ಬಗ್ಗೆ ತನಿಖೆ ನಡೆಸಿ, ನೈಜ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಮನೋಜ್‌ ಜೈನ್‌ ಭರವಸೆ ನೀಡಿದರು.

ಹಾಸನ ವಿಭಾಗಾಧಿಕಾರಿಯಾಗಿದ್ದ ಎಚ್.ಎಲ್‌.ನಾಗರಾಜ್‌, ಎಚ್‌ಆರ್‌ಪಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಶ್ರೀನಿವಾಸಗೌಡ, ಹಾಸನ ಉಪವಿಭಾಗಾಧಿಕಾರಿ ನವೀನ್‌ ಭಟ್‌, ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್‌ ನಂದನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.