ADVERTISEMENT

ಪರಿವೀಕ್ಷಣಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ: ಜೆಡಿಎಸ್

ಶಾಸಕ ಎಚ್‌.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರ ಧರಣಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 15:33 IST
Last Updated 1 ಅಕ್ಟೋಬರ್ 2020, 15:33 IST
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಹಾಸನ: ‘ಸಹಕಾರ ಸಂಘಗಳ ಚುನಾವಣೆ ವಿಚಾರದಲ್ಲಿ ಪರಿವೀಕ್ಷಣಾ ಅಧಿಕಾರಿ ಸುನಿಲ್‌ ಎಂಬಾತ ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದು, ಆ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ‘ಸಹಕರ ಸಂಘಗಳ ಪರಿವೀಕ್ಷಣಾ ಅಧಿಕಾರಿ ಸುನಿಲ್‌ ಕಾನೂನು ಮೀರಿ ಕೆಲಸ ಮಾಡುತ್ತಿದ್ದಾರೆ. ನಗರದ ಜನತಾ ಬಜಾರ್, ಸಂಜೀವಿನಿ ಸಹಕಾರ ಸಂಘಗಳ ಚುನಾವಣೆ ನಡೆಯಬೇಕಿದೆ. ಅ. 25ರ ಒಳಗೆ ಚುನಾವಣೆ ನಡೆಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಇನ್ನು ಮತದಾರರ ಪಟ್ಟಿ ಪರಿಷ್ಕರಣೆಯಲ್ಲೇ ಅಧಿಕಾರಿ ಇದ್ದಾರೆ. ಯಾರದ್ದೋ ಮಾತು ಕೇಳಿ ನ್ಯಾಯಾಲಯ ಆದೇಶ ಉಲ್ಲಂಘಿಸುವುದು ಖಂಡನೀಯ’ ಎಂದು ಕಿಡಿಕಾರಿದರು.

‘ಚುನಾವಣೆ ವಿಳಂಬವಾಗಲಿ ಎಂಬ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಈಗಲೇ ಅಧಿಸೂಚನೆ ಹೊರಡಿಸಬೇಕು. ಬಿಜೆಪಿಗೆ ಅಧಿಕಾರ ದೊರಕಿಸಿಕೊಡಲು ಈ ರೀತಿ ವರ್ತಿಸುತ್ತಿದ್ದಾರೆ. ಸುನಿಲ್ ಹಲವಾರು ಸೊಸೈಟಿಗಳಿಗೆ ಚುನಾವಣೆ ಅಧಿಕಾರಿಯಾಗಿದ್ದಾರೆ. ಈತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಕಚೇರಿಯಲ್ಲಿ ವಿಶ್ವಕರ್ಮ ಸಮುದಾಯದ ಯುವತಿಯೊಬ್ಬರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ವಿಪರೀತ ಕಿರಕುಳ ನೀಡುತ್ತಿದ್ದಾನೆ. ತಾನು ಹೇಳಿದಂತೆ ಫೈಲ್‍ಗಳು ಸಿದ್ಧವಾಗಬೇಕು ಎಂದು ಕಟ್ಟಪ್ಪಣೆ ವಿಧಿಸುತ್ತಿದ್ದಾನೆ. ಆತನ ವಿರುದ್ಧ ಜಾತಿ ನಿಂದನೆ ಪ್ರಕರಣ ಸಹ ದಾಖಲಾಗಿದೆ. ಇಷ್ಟೆಲ್ಲ ಪುರಾವೆಗಳಿದ್ದರೂ ಆತನ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್, ‘ಅ. 18 ಅಥವಾ 25 ರಂದು ಚುನಾವಣೆ ನಡೆಸುವಂತೆ ಕೋರ್ಟ್ ಸೂಚನೆ ಇದೆ. ಸಹಕಾರ ಸಂಘಗಳ ಜಂಟಿ ನಿರ್ದೇಶಕರ ಜತೆಗೆ ಈ ಕುರಿತು ಚರ್ಚಿಸುತ್ತೇನೆ. ಯಾವುದೇ ಕಾನೂನು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಶಾಸಕ ಕೆ.ಎಸ್. ಲಿಂಗೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌, ಜೆಡಿಎಸ್‌ ಮುಖಂಡ ಬಿ.ವಿ. ಕರಿಗೌಡ, ಎಪಿಎಂಸಿ ಅಧ್ಯಕ್ಷ ಮಂಜೇಗೌಡ, ಸೋಮನಹಳ್ಳಿ ನಾಗರಾಜ್, ಎಚ್.ಎಸ್. ಅನಿಲ್‍ಕುಮಾರ್, ಬಿದರಕೆರೆ ಜಯರಾಮ್ ಹಾಗೂ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.