ಹಾಸನ: ಎಪಿಎಂಸಿ, ಭೂ ಸುಧಾರಣಾ ಹಾಗೂ ವಿದ್ಯುತ್ ಕಾಯಿದೆ ತಿದ್ದುಪಡಿ ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ದಲಿತ ಸಂಘಟನೆಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಐಕ್ಯ ಹೋರಾಟ ನಡೆಸಿದವು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೋವಿಡ್ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ್ದು, ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಪ್ರವಾಹದಿಂದ ಸಾಕಷ್ಟು ಹಾನಿ ಉಂಟಾಗಿದೆ. ಉದ್ಯೋಗ ಸಮಸ್ಯೆ, ಕೂಲಿ ನಷ್ಟ, ಕಾರ್ಮಿಕರ ವಲಸೆ, ಕೊರೊನಾ ಭೀತಿ, ದುಬಾರಿ ವೈದ್ಯಕೀಯ ವೆಚ್ಚದ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನ ಸಾಮಾನ್ಯರನ್ನು ಚಿಂತೆಗೀಡು ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಗಂಭೀರ ಸಮಸ್ಯೆಗಳಿಗೆ ಸ್ಪಂದಿಸದೆ, ಪರಿಹಾರ ಕಲ್ಪಿಸದೆ ಜನ ವಿರೋಧದ ನಡುವೆಯೂ ಸುಗ್ರೀವಾಜ್ಞೆ ಹೊರಡಿಸಿ ಜನರು ಮತ್ತಷ್ಟು ಕಂಗೆಡುವಂತೆ ಮಾಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಹೊರಡಿಸಿರುವ ಸುಗ್ರಿವಾಜ್ಞೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸರ್ಕಾರಿ, ಸಹಕಾರಿ, ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್‌ಗಳ ಮಾರಾಟ, ಜಿ.ಎಸ್.ಟಿ., ಸಿಎಎ., ಎನ್‌ಆರ್‌ಸಿ., ರಾಷ್ಟ್ರೀಯ ಶಿಕ್ಷಣ ನೀತಿ, ಮೇಲ್ವರ್ಗಕ್ಕೆ ಶೇಕಡಾ 10ರಷ್ಟು ಮೀಸಲಾತಿ, ಕಾರ್ಮಿಕರ ಉದ್ಯೋಗ ನಷ್ಟ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರಾಕರಣೆ, ಕಾರ್ಪೊರೇಟ್ ಉದ್ದಿಮೆದಾರರ ಸಾಲ ಮನ್ನಾ, ಆರ್‌ಬಿಐ ನ ಆಪದ್ದನ ದುರ್ಬಳಕೆ ಇತ್ಯಾದಿಗಳು ಬಂಡವಾಳಶಾಹಿ ಹಿತಾಸಕ್ತಿಗಳು ಮೇಲುಗೈ ಪಡೆದಿರುವುದಕ್ಕೆ ಜ್ವಲಂತ ಉದಾಹರಣೆಯಾಗಿವೆ ಎಂದು ಟೀಕಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಆನೆಕೆರೆ ರವಿ, ಜಿಲ್ಲಾಧ್ಯಕ್ಷ ಬಾಬು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಸಂಘರ್ಷ ಸಮಿತಿ ಮುಖಂಡ ಕೆ. ಈರಪ್ಪ, ಅಂಬುಗ ಮಲ್ಲೇಶ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಶ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಎಂ.ಜಿ. ಪೃಥ್ವಿ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.